ಟಿ20 ವಿಶ್ವಕಪ್: ನಾಳಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 'ಭಾರತ ಗೆಲ್ಲಲಿ' ಎಂದು ಪಾಕಿಸ್ತಾನ ಪ್ರಾರ್ಥನೆ!!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದಾಗಿ ಕೆಂಗೆಟ್ಟಿರುವ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥನೆ ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದಾಗಿ ಕೆಂಗೆಟ್ಟಿರುವ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥನೆ ಮಾಡುತ್ತಿದೆ.

ಹೌದು.. ಅಚ್ಚರಿಯಾದರೂ ಇದು ಸತ್ಯ... ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ (T20 WorldCup) ಪಾಕಿಸ್ತಾನ ತಂಡದ ಪಯಣ ಬಹುತೇಕ ಅಂತ್ಯವಾಗಿದ್ದು, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿದ್ದ ಬಾಬರ್ ಅಜಂ ಪಡೆ, ಎರಡನೇ ಪಂದ್ಯದಲ್ಲಿ ದುರ್ಬಲ ಜಿಂಬಾಬ್ವೆ ವಿರುದ್ಧವೂ  ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಪಾಕಿಸ್ತಾನ ತಂಡ ಟೂರ್ನಿಯಿಂದ ಬಹುತೇಕ ಔಟ್ ಆಗಿದ್ದು, ಬಾಬರ್ ಅಜಂ ಪಡೆಯ ಟೂರ್ನಿಯ ಭವಿಷ್ಯ ಇದೀಗ ಇತರೆ ತಂಡಗಳ ಫಲಿತಾಂಶದ ಮೇಲೆ ನಿಂತಿದೆ.

ಪಾಕಿಸ್ತಾನ ತಂಡ ಸೆಮಿಸ್‌ಗೆ ತೆರಳಲು ತನ್ನ ಪಾಲಿನ ಉಳಿದ ಎಲ್ಲ 3 ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೇ ಭಾರತ ಸೇರಿದಂತೆ ಕೆಲ ತಂಡಗಳ ಸೋಲು ಗೆಲುವಿನ ಮೇಲೂ ಅವಲಂಬನೆಯಾಗಬೇಕಿದೆ.

ಪಾಕಿಸ್ತಾನದ ಸೆಮೀಸ್ ಕನಸು ಕಠಿಣ
ಸೂಪರ್-12 ಗುಂಪು-2ರಲ್ಲಿರುವ 6 ತಂಡಗಳ ಪೈಕಿ ಸತತ ಗೆಲುವು ಸಾಧಿಸಿರುವ ಭಾರತ ಅಗ್ರಸ್ಥಾನದಲ್ಲಿದ್ದರೆ, 2 ಪಂದ್ಯಗಳಲ್ಲೂ ಸೋಲು ಕಂಡಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಈಗಾಗಲೇ 2 ಪಂದ್ಯಗಳಲ್ಲಿ ಸೋತಿದ್ದು, ಉಳಿದ 3 ಪಂದ್ಯಗಳಲ್ಲಿ ಗೆಲುವು ನಿರ್ಣಾಯಕವಾಗಿ ಬೇಕಿದೆ. ಜೊತೆಗೆ ರನ್‌ರೇಟ್‌ನತ್ತಲೂ ಗಮನಿಸಬೇಕಿದೆ. 

ಭಾರತದ ಸತತ ಗೆಲುವಿಗೆ ಪಾಕ್ ಪ್ರಾರ್ಥನೆ!!
ಪಾಕಿಸ್ತಾನ ಸೆಮಿಫೈನಲ್‌ ಹಂತಕ್ಕೇರಲು ಮೂರು ಪಂದ್ಯಗಳ ಗೆಲುವು ಮಾತ್ರವಲ್ಲ. ನಾಳೆ ನಡೆಯುವ ಸೂಪರ್ ಸಂಡೇ ಮ್ಯಾಚ್‌ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಸೋಲಲೇಬೇಕಿದೆ. ಅದೇ ಸಮಯದಲ್ಲಿ ಬಾಂಗ್ಲಾದೇಶ ಇನ್ನೊಂದು ಪಂದ್ಯದಲ್ಲಿ ಸೋಲಬೇಕು. ಭಾರತ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಈ ಮೂರು ತಂಡಗಳನ್ನು ಸೋಲಿಸಬೇಕು. ಅಂದುಕೊಂಡಂತೆ ಎಲ್ಲವೂ ಆದರೆ ಪಾಕಿಸ್ತಾನ ಸೆಮಿಸ್‌ಗೆ ತಲುಪುವ ಸಾಧ್ಯತೆಯಿದೆ. 

ಒಂದು ವೇಳೆ ಸೂಪರ್ 12 ಸುತ್ತಿನಲ್ಲಿ ಭಾರತ ಸೋತರೆ, ಪಾಕಿಸ್ತಾನ ಸೆಮಿಸ್ ರೇಸ್‌ನಿಂದ ಹೊರಗುಳಿಯುತ್ತದೆ. ಹಾಗಾಗಿ ಪಾಕಿಸ್ತಾನ ತಂಡ ಈಗ ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿದೆ. ಅದಕ್ಕಾಗಿಯೇ ಪಾಕಿಸ್ತಾನದ ಅಭಿಮಾನಿಗಳು ಈಗ ಭಾರತದ ಗೆಲುವಿಗಾಗಿ ಕಾದುಕುಳಿತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com