ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು; ಕಾಲ್ತುಳಿತದಿಂದ ಹಲವರಿಗೆ ಗಾಯ

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಟಿಕೆಟ್ ಪಡೆಯಲು ಹೈದರಾಬಾದ್ ನ ಜಿಮ್ಖಾನಾ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿ ಕನಿಷ್ಠ 4 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೈದರಾಬಾದ್ ನಲ್ಲಿ ಕಾಲ್ತುಳಿತ
ಹೈದರಾಬಾದ್ ನಲ್ಲಿ ಕಾಲ್ತುಳಿತ
Updated on

ಹೈದರಾಬಾದ್: ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಟಿಕೆಟ್ ಪಡೆಯಲು ಹೈದರಾಬಾದ್ ನ ಜಿಮ್ಖಾನಾ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿ ಕನಿಷ್ಠ 4 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಆರಂಭವಾಗಲಿದೆ. ಹೀಗಾಗಿ ಇಲ್ಲಿ ಪ್ರೇಕ್ಷಕರಿಗೆ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಏಕಾಏಕಿ ಮೈದಾನದಲ್ಲಿ ಯಥೇಚ್ಛ ಪ್ರಮಾಣದ ಜನರ ಆಗಮಿಸಿದ್ದು, ಈ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ. ಪರಿಣಾಮ ಘಟನೆಯಲ್ಲಿ ಕನಿಷ್ಟ 4 ಮಂದಿಗೆ ಗಾಯಗಳಾಗಿವೆ ಎನ್ನಲಾಗಿದೆ.

 ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಜಿಮ್ಖಾನಾ ಮೈದಾನದಲ್ಲಿ ಪಂದ್ಯದ ಆಫ್‌ಲೈನ್ ಟಿಕೆಟ್ ನೀಡುವ ಮಾಹಿತಿ ತಿಳಿದು ಸುಮಾರು 30,000 ಜನರು ಮೈದಾನದಲ್ಲಿ ಜಮಾಯಿಸಿದ್ದರು ಎಂದು ತಿಳಿದು ಬಂದಿದೆ.

ಬೆಳಗ್ಗೆ 5 ಗಂಟೆಯಿಂದಲೇ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದು, ಟಿಕೆಟ್ ಕೌಂಟರ್ ತೆರೆಯುವ ವೇಳೆಗೆ ಸರತಿ ಸಾಲು ಉದ್ದವಾಯಿತು. ಜನರ ನೂಕುನುಗ್ಗಲು ಹಿನ್ನೆಲೆಯಲ್ಲಿ ಹೈದರಾಬಾದ್‌ನ ಅಧಿಕಾರಿಗಳು ಗುಂಪನ್ನು ನಿರ್ವಹಿಸಲು ಕಷ್ಟವಾಯಿತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕೆಟ್ ಕೌಂಟರ್​ಗಳನ್ನು 10 ಗಂಟೆಗೆ ತೆರೆದ ಕ್ರೀಡಾಂಗಣದ ಸಿಬ್ಬಂದಿ ಏಕಕಾಲಕ್ಕೆ 20 ಮಂದಿಯನ್ನು ಮಾತ್ರ ಒಳಗೆ ಬಿಟ್ಟು, ಟಿಕೆಟ್ ಕೊಡುತ್ತಿದ್ದರು. ಟಿಕೆಟ್ ವಿತರಣೆ ತಡವಾಗುತ್ತಿದೆ ಎಂದು ಆರೋಪಿಸಿದ ಅಭಿಮಾನಿಗಳು ಏಕಾಏಕಿ ಒಳನುಗ್ಗಲು ಯತ್ನಿಸಿದರು. ಕೇವಲ ನಗದನ್ನು ಮಾತ್ರ ಸ್ವೀಕರಿಸಿ ಟಿಕೆಟ್ ವಿತರಿಸಲಾಗುತ್ತಿದೆ. ಆನ್​ಲೈನ್ ಪೇಮೆಂಟ್​ಗೆ ಅವಕಾಶವಿಲ್ಲ ಎನ್ನುವುದೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. 

ಒಬ್ಬರಿಗೆ ಎರಡು ಟಿಕೆಟ್ ಮಾತ್ರ ಕೊಡಲಾಗುತ್ತಿದೆ. ಟಿಕೆಟ್​ಗಾಗಿ ಬರುವವರು ಆಧಾರ್​ ಕಾರ್ಡ್​ನ ಜೆರಾಕ್ಸ್​ ಪ್ರತಿಯೊಂದಿಗೆ ಇಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಕೊಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಮೂರು ವರ್ಷಗಳಿಂದ ಪ್ರತ್ಯಕ್ಷ ಮ್ಯಾಚ್ ನೋಡಲು ಸಾಧ್ಯವಾಗದಿದ್ದ ಅಭಿಮಾನಿಗಳು ಟಿಕೆಟ್​ ಖರೀದಿಗಾಗಿ ಕಾತರದಿಂದ ಕಾಯುತ್ತಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉಪ್ಪಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ಪಂದ್ಯ ನಡೆಯಲಿದೆ. ಆನ್​ಲೈನ್​ನಲ್ಲಿ 15 ಸಾವಿರ ಟಿಕೆಟ್​ಗಳನ್ನು ಮಾರಾಟ ಮಾಡಲಾಗಿದೆ. ಆಫ್​ಲೈನ್​ನಲ್ಲಿ 15 ಸಾವಿರ ಟಿಕೆಟ್ ಮಾರಲಾಗುತ್ತಿದೆ. 

ಕಾಲ್ತುಳಿತದಿಂದ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಹಲವು ಅಭಿಮಾನಿಗಳು ತೀವ್ರವಾಗಿ ಗಾಯಗೊಂಡಿದ್ತದಾರೆ. ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com