![ಆಸಿಸ್ ಆಟಗಾರ ಮಿಚೆಲ್ ಮಾರ್ಷ್](http://media.assettype.com/kannadaprabha%2Fimport%2F2023%2F12%2F1%2Foriginal%2FMitchell-Marsh-Breaks-Silen.jpg?w=480&auto=format%2Ccompress&fit=max)
ಸಿಡ್ನಿ: ಏಕದಿನ ವಿಶ್ವಕಪ್ ಗೆದ್ದು ಟ್ರೋಫಿ ಮೇಲೆ ಕಾಲಿಟ್ಟು ಅಹಂಕಾರ ಪ್ರದರ್ಶನ ಮಾಡಿದ್ದ ಆಸ್ಟ್ರೇಲಿಯಾ ತಂಡದ ಮಿಚೆಲ್ ಮಾರ್ಷ್ ವಿವಾದ ಸಂಬಂದ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಮಾತ್ರವಲ್ಲದೇ ಮತ್ತೊಮ್ಮೆ ಕಾಲಿಡುತ್ತೇನೆ ಎಂದು ಹೇಳುವ ಮೂಲಕ ಉದ್ಧಟತನ ಪ್ರದರ್ಶಸಿದ್ದಾರೆ.
ಭಾರತದ ವಿರುದ್ಧ ಫೈನಲ್ ಪಂದ್ಯ ಗೆದ್ದು ಬಳಿಕ ಡ್ರೆಸಿಂಗ್ ರೂಮಿನಲ್ಲಿ ವಿಶ್ವಕಪ್ (ICC World Cup 2023) ಟ್ರೋಫಿಯ ಮೇಲೆ ಆಸಿಸ್ ಆಟಗಾರ ಮಿಚೆಲ್ ಮಾರ್ಷ್ ಕಾಲಿಟ್ಟು ದುರಹಂಕಾರ ಮೆರೆದಿದ್ದರು. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿ ಮಿಚೆಲ್ ಮಾರ್ಷ್ ಮತ್ತು ಆಸಿಸ್ ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೆ ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್ ಪ್ರತಿಕ್ರಿಯೆ ನೀಡಿದ್ದು, “ನಾನು ಮತ್ತೆ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುತ್ತೇನೆ, ಏನಿವಾಗ” ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಿಚೆಲ್ ಮಾರ್ಷ್, “ನಾನು ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುತ್ತೇನೆ. ಹಾಗಂತ, ನಾನು ವಿಶ್ವಕಪ್ ಟ್ರೋಫಿಗೆ ಅಗೌರವ ತೋರಿದೆ ಎಂದು ಅರ್ಥವಲ್ಲ. ಟ್ರೋಫಿ ಮೇಲೆ ಕಾಲಿಟ್ಟಿರುವ ಸಂಗತಿಯನ್ನು ನಾನೇನು ಗಂಭೀರವಾಗಿ ಪರಿಗಣಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಷಯಗಳ ಬಗ್ಗೆಯೂ ನಾನು ಹೆಚ್ಚು ಗಮನ ಹರಿಸಿಲ್ಲ. ಸಾಮಾಜಿಕ ಜಾಲತಾಣಗಳ ಟೀಕೆಗಳ ಬಗ್ಗೆ ಎಲ್ಲರೂ ನನಗೆ ಹೇಳಿದ್ದಾರೆ. ಆದರೆ, ನಾನು ಮತ್ತೊಮ್ಮೆ ವಿಶ್ವಕಪ್ ಮೇಲೆ ಕಾಲಿಡುತ್ತೇನೆ. ಅದೊಂದು ಸಂಭ್ರಮಾಚರಣೆ ಅಷ್ಟೇ” ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಕೆಲವೇ ಗಂಟೆಗಳ ನಂತರ ಮಿಚೆಲ್ ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ನವೆಂಬರ್ 19 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಿತು. ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ಆಟಗಾರರು ಆರಾಮವಾಗಿ ಕುಳಿತು ಪರಸ್ಪರ ಮಾತನಾಡುತ್ತಿದ್ದ ಹೋಟೆಲ್ ಕೋಣೆಯಿಂದ ಈ ಫೋಟೊ ಶೇರ್ ಮಾಡಲಾಗಿತ್ತು.
Advertisement