
ನವದೆಹಲಿ:2023 ಹೊಸ ವರ್ಷವನ್ನು ಜಗತ್ತಿನಾದ್ಯಂತ ಸಂಭ್ರಮಿಸಲಾಗುತ್ತಿದೆ. ಈ ನಡುವೆ ಭಾರತೀಯ ಕ್ರಿಕೆಟ್ ಮಂಡಳಿ ಸಮಯ ವ್ಯರ್ಥ ಮಾಡದೇ ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಮುಖ್ಯ ಕೋಚ್, ಎನ್ ಸಿಎ ಮುಖ್ಯಸ್ಥರು, ಆಯ್ಕೆಗೆ ಸಂಬಂಧಿಸಿದ ಅಧಿಕಾರಿಗಳು, ಬಿಸಿಸಿಐ ನ ಉನ್ನತ ಅಧಿಕಾರಿಗಳು ಪ್ರಮುಖ ಸಭೆ ನಡೆಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಹಾಗೂ ಒಡಿಐ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಐಪಿಎಲ್ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ನಿರ್ದಿಷ್ಟ ಆಟಗಾರರ ಮೇಲೆ ಕಣ್ಣಿಡಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2023 ರ ಐಸಿಸಿ ಸಿಡಬ್ಲ್ಯುಸಿಯ ಪುರುಷರ ವಿಭಾಗದ ಎಫ್ ಟಿ ಪಿ ಹಾಗೂ ಅದಕ್ಕೆ ಸಂಬಂಧಿಸಿದ ತಯಾರಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿ ಜೈ ಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲಸದ ಹೊರೆ ನಿರ್ವಹಣೆ ಸಭೆಯ ಒಂದಶವಾಗಿದ್ದರೆ, ಮಂಡಳಿ ಯೋ ಯೋ ಪರೀಕ್ಷೆ, ಡೆಕ್ಸಾ (ಬೋನ್ ಸ್ಕ್ಯಾನ್ ಪರೀಕ್ಷೆ) ಯನ್ನು ಆಯ್ಕೆಯ ಮಾನದಂಡದ ಪರೀಕ್ಷೆಯನ್ನಾಗಿ ಮರಳಿ ಪರಿಚಯಿಸುವುದಕ್ಕೆ ನಿರ್ಧರಿಸಿದೆ.
2022 ರಲ್ಲಿ ಭಾರತದ ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು. 2021-22 ರಲ್ಲಿಯೂ ಬಿಸಿಸಿಐ ಕೆಲವು ಬದಲಾವಣೆಗಳನ್ನು ಘೋಷಿಸಿತ್ತು. ಆದರೆ ಅದು ಫಲಿಸಿರಲಿಲ್ಲ.
Advertisement