3ನೇ ಟೆಸ್ಟ್: ಭಾರತಕ್ಕೆ ಮುಳುವಾದ ಕಳಪೆ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 9 ವಿಕೆಟ್ ಗಳ ಭರ್ಜರಿ ಜಯ
ಇಂದೋರ್: ನಿರೀಕ್ಷೆಯಂತೆಯೇ ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ಎದುರು 9 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಗೆ ಭಾರತ 76 ರನ್‌ಗಳ ಗುರಿ ನೀಡಿತ್ತು.. ಇಂದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 1 ವಿಕೆಟ್ ಕಳೆದುಕೊಂಡು ಗುರಿಯನ್ನು ಸಾಧಿಸಿ 9 ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 49 ಮತ್ತು ಲಬುಶೆನ್ 28 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೂರನೇ ದಿನದಲ್ಲಿ ಖವಾಜಾ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಮೊದಲ ಮುನ್ನಡೆ ಪಡೆದರು, ಆದರೆ ನಂತರ ಭಾರತೀಯ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸಿಸ್ ಪಡೆ 9 ವಿಕೆಟ್ ಗಳ ಅಂತರದಲ್ಲಿ ನಿಗದಿತ ಗುರಿ ತಲುಪಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದಕ್ಕೂ ಮುನ್ನ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 163 ರನ್ ಗಳಿಸಲಷ್ಟೇ ಶಕ್ತವಾಗಿ ಆಸ್ಟ್ರೇಲಿಯಾಕ್ಕೆ 76 ರನ್‌ಗಳ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ಪರ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 64 ರನ್ ನೀಡಿ 8 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತದ ಪರ ಚೇತೇಶ್ವರ ಪೂಜಾರ 59 ರನ್‌ಗಳ ಇನಿಂಗ್ಸ್ ಆಡಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 109 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 197 ರನ್ ಗಳಿಸಿ 88 ರನ್ ಮುನ್ನಡೆ ಸಾಧಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ