ಐಪಿಎಲ್ 2023: ವೈಯುಕ್ತಿಕ ದಾಖಲೆ ಬದಿಗೊತ್ತಿ 'ಜೈಸ್ವಾಲ್' ಶತಕಕ್ಕೆ ನೆರವಾದ ಸಂಜು ಸ್ಯಾಮ್ಸನ್: ಈತ 'ಜೂನಿಯರ್ ಧೋನಿ' ಎಂದ ಅಭಿಮಾನಿಗಳು!

ಐಪಿಎಲ್ 2023 ಟೂರ್ನಿಯ ನಿನ್ನೆಯ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಶತಕದ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಪೂರ್ತಿ ಬೌಲಿಂಗ್ ಮಾಡಿದ್ದ ಕೆಕೆಆರ್ ಬೌಲರ್ ಗೆ ಸಂಜು ಸ್ಯಾಮ್ಸನ್ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದು ಮಾತ್ರವಲ್ಲದೇ ತಮ್ಮ ಕಾರ್
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್
Updated on

ನವದೆಹಲಿ: ಐಪಿಎಲ್ 2023 ಟೂರ್ನಿಯ ನಿನ್ನೆಯ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಶತಕದ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಪೂರ್ತಿ ಬೌಲಿಂಗ್ ಮಾಡಿದ್ದ ಕೆಕೆಆರ್ ಬೌಲರ್ ಗೆ ಸಂಜು ಸ್ಯಾಮ್ಸನ್ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದು ಮಾತ್ರವಲ್ಲದೇ ತಮ್ಮ ಕಾರ್ಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಹೌದು.. ಯಶಸ್ವಿ ಜೈಸ್ವಾಲ್ ಶತಕವನ್ನು ತಪ್ಪಿಸಲು ಕೋಲ್ಕತ್ತಾ ಬೌಲರ್ ಸುಯೇಶ್ ಶರ್ಮಾ ಹರಸಾಹಸ ಪಟ್ಟರೆ ಅತ್ತ ನಾಯಕ ಸಂಜು ಸ್ಯಾಮ್ಸನ್ ಸೆಂಚುರಿ ಗಳಿಸಲೆಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (KKR vs RR) ನಡುವಣ ಪಂದ್ಯ ಕೂಡ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಕೆಆರ್ ಬೌಲರ್​ಗಳ ಬೆಂಡೆತ್ತಿದ ರಾಜಸ್ಥಾನ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಕೇವಲ 47 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಈ ಮೂಲಕ 2 ರನ್​ಗಳಿಂದ ಶತಕ ವಂಚಿತರಾದರು.

ಆದರೆ ಜೈಸ್ವಾಲ್ ಶತಕವನ್ನು ತಪ್ಪಿಸಲು ಕೋಲ್ಕತ್ತಾ ಬೌಲರ್ ಹರಸಾಹಸ ಪಟ್ಟರೆ ಅತ್ತ ನಾಯಕ ಸಂಜು ಸ್ಯಾಮ್ಸನ್ ಅವರು ಯಶಸ್ವಿ ಸೆಂಚುರಿ ಗಳಿಸಲೆಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಅದರಲ್ಲೂ 12.5 ಓವರ್ ಆಗುವಾಗ ನಡೆದ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ವಿಡಿಯೋ ಧೋನಿ ಮತ್ತು ಕೊಹ್ಲಿ ನಡುವಿನ ಪ್ರಸಂಗವನ್ನು ನೆನಪು ಮಾಡುತ್ತಿದೆ.

ಇಷ್ಚಕ್ಕೂ ಆಗಿದ್ದೇನು?
ರಾಜಸ್ಥಾನ ರಾಯಲ್ಸ್ ತಂಡದ ಇನ್ನಿಂಗ್ಸ್ ನ 13ನೇ ಓವರ್ ಅನ್ನು ಸುಯಾಶ್ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಇದ್ದರು. ಅತ್ತ ನಾನ್​ಸ್ಟ್ರೈಕರ್​ನಲ್ಲಿ ಯಶಸ್ವಿ ಜೈಸ್ವಾಲ್ 94 ರನ್ ಗಳಿಸಿ ಶತಕದ ಅಂಚಿನಲ್ಲಿ ನಿಂತಿದ್ದರು. ಜೈಸ್ವಾಲ್ ಶತಕಕ್ಕೆ ಒಂದು ಸಿಕ್ಸರ್ ಬೇಕಿತ್ತಷ್ಟೆ. ಆದರೆ, ಆರ್​ಆರ್​ ಗೆಲುವಿಗೆ ಕೇವಲ 3 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕೊನೆಯ ಎಸೆತವನ್ನು ಸುಯಾಶ್ ಅವರು ಸ್ಯಾಮ್ಸನ್​ಗೆ ಲೆಗ್​ ಸೈಡ್ ಎಸೆದು ವಿಕೆಟ್ ಹಿಂಭಾಗದಿಂದ ಚೆಂಡು ವೈಡ್ ಫೋರ್ ಹೋಗಲಿ ಎಂದು ಎಸೆದರು.

ಆದರೆ ಕ್ಷಣಮಾತ್ರದಲ್ಲಿ ಕೆಕೆಆರ್ ಬೌಲರ್​ನ ಕಳ್ಳಾಟವನ್ನು ಅರಿತ ಸ್ಯಾಮ್ಸನ್ ತಾನು ಕೂಡ ವಿಕೆಟ್ ಮುಂದೆ ಬಂದು ವೈಡ್ ಬಾಲ್ ಅನ್ನು ಒಳಗೆ ಎಳೆದುಕೊಂಡು ರಕ್ಷಣಾತ್ಮಕವಾಗಿ ಡಿಫಂಡ್ ಮಾಡಿದರು. ಬಳಿಕ ಜೈಸ್ವಾಲ್​ಗೆ ನೀವು ಸಿಕ್ಸ್ ಸಿಡಿಸು ಎಂಬ ಸೂಚನೆ ನೀಡಿದರು. ಆದರೆ, ಮುಂದಿನ ಓವರ್​ನಲ್ಲಿ ಜೈಸ್ವಾಲ್​ಗೆ ಸಿಕ್ಸರ್ ಸಿಡಿಸಲು ಸಾಧ್ಯವಾಗಿಲ್ಲ. ಬದಲಾಗಿ ಚೆಂಡನ್ನು ಫೋರ್​ಗೆ ಅಟ್ಟಿ ವಿನ್ನಿಂಗ್ ಶಾಟ್ ಹೊಡೆದರು.

ಇನ್ನು ಸಹ ಆಟಗಾರನ ದಾಖಲೆಗಾಗಿ ತಮ್ಮ ವೈಯುಕ್ತಿಕ ದಾಖಲೆಯನ್ನು ಸಂಜು ಸ್ಯಾಮ್ಸನ್ ಬದಿಗೊತ್ತಿದ್ದಾರೆ. ಅಚ್ಚರಿ ಎಂದರೆ ಸಂಜು ಸ್ಯಾಮ್ಸನ್ ಜೈಸ್ವಾಲ್ ಗೆ ಕ್ರೀಸ್ ಬಿಟ್ಟುಕೊಡುವ ವೇಳೆ ಅವರೂ ಕೂಡ ಆಗ 48 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರು. ಅವರು ಬಯಸಿದ್ದರೆ ಆ ಓವರ್ ನಲ್ಲಿ ಅರ್ಧಶತಕ ಗಳಿಸಬಹುದಿತ್ತು. ಆದರೆ ಅವರು ಜೈಸ್ವಾಲ್ ಶತಕ ಸಿಡಿಸಲೆಂದು ಡಾಟ್ ಬಾಲ್ ಮಾಡಿ ಜೈಸ್ವಾಲ್ ಗೆ ಕ್ರೀಸ್ ಬಿಟ್ಟುಕೊಟ್ಟರು. ಸ್ಯಾಮ್ಸನ್ ಅವರ ಈ ಕಾರ್ಯಕ್ಕೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದ್ದು, ಸ್ಯಾಮ್ಸನ್ ಜೂನಿಯರ್ ಧೋನಿ ಎಂದು ಕ್ರೀಡಾಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಈ ಹಿಂದೆ ಧೋನಿ ಕೂಡ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆಗಾಗಿ ಇಂತಹುದೇ ತ್ಯಾಗ ಮಾಡಿದ್ದರು.

ಕೆಕೆಆರ್ ಬೌಲರ್ ಸುಯಾಶ್ ವಿರುದ್ಧ ಆಕ್ರೋಶ
ಇನ್ನು ಜೈಸ್ವಾಲ್ ಶತಕ ತಪ್ಪಿಸಲೆಂದೇ ಕೆಕೆಆರ್ ಬೌಲರ್ ಸುಯಾಶ್ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿ ಆಡಿದ್ದರು. ವೈಡ್ ಮೂಲಕ ನಾಲ್ಕು ರನ್ ನೀಡಿ ಅತ್ತ ಸ್ಯಾಮ್ಸನ್ ರ ಅರ್ಧಶತಕ ಮತ್ತು ಇತ್ತ ಜೈಸ್ವಾಲ್ ಶತಕ ತಪ್ಪಿಸಲು ಸುಯಾಶ್ ಪ್ರಯತ್ನಿಸಿದ್ದರು. ಹೀಗಾಗಿ ಕ್ರೀಡಾ ಸ್ಫೂರ್ತಿ ಮರೆತ ಸುಯಾಶ್ ವಿರುದ್ಧ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com