'ನೀವು PCB ನಡೆಸುತ್ತಿದ್ದೀರಿ, ಕ್ಲಬ್ ಅಲ್ಲ..' ಲೈವ್ ಶೋನಲ್ಲಿ ಪಿಸಿಬಿ ಅಧ್ಯಕ್ಷ ಝಕಾ ವಿರುದ್ಧ ಅಫ್ರಿದಿ ಗರಂ

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2023ರ ವಿಶ್ವಕಪ್‌ಗೆ ಮರಳಿದೆ. ಆದರೆ ಮೈದಾನದ ಹೊರಗೆ, ನಾಯಕ ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ಸಂಬಂಧಿಸಿದ ವಿವಾದ ಮುಂದುವರೆದಿದೆ. 
ಝಾಕಾ ಅಶ್ರಪ್-ಶಾಹಿದ್ ಅಫ್ರಿದಿ
ಝಾಕಾ ಅಶ್ರಪ್-ಶಾಹಿದ್ ಅಫ್ರಿದಿ

ನವದೆಹಲಿ: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2023ರ ವಿಶ್ವಕಪ್‌ಗೆ ಮರಳಿದೆ. ಆದರೆ ಮೈದಾನದ ಹೊರಗೆ, ನಾಯಕ ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ಸಂಬಂಧಿಸಿದ ವಿವಾದ ಮುಂದುವರೆದಿದೆ. 

ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಎರಡು ದಿನಗಳ ಹಿಂದೆ, ಪಾಕಿಸ್ತಾನದ ಟಿವಿ ಚಾನೆಲ್ ವೊಂದರಲ್ಲಿ ಬಾಬರ್ ಅಜಂ ಮತ್ತು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲ್ಮಾನ್ ನಸೀರ್ ನಡುವಿನ ಸಂಭಾಷಣೆಯನ್ನು ಲೈವ್ ಶೋನಲ್ಲಿ ತೋರಿಸಿದ್ದರು. ಈ ಚಾಟ್‌ನಲ್ಲಿ, ಸಲ್ಮಾನ್ ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್‌ಗೆ ಕರೆ ಮಾಡಲು ಸಂಬಂಧಿಸಿದ ಪ್ರಶ್ನೆಯನ್ನು ಬಾಬರ್‌ಗೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬಾಬರ್ ಪಿಸಿಬಿ ಅಧ್ಯಕ್ಷರಿಗೆ ಕರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನಾಯಕನ ಮಾತನ್ನು ಸಾರ್ವಜನಿಕಗೊಳಿಸಿದಾಗಿನಿಂದಲೂ ಪಿಸಿಬಿ ಮುಖ್ಯಸ್ಥರು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಶಾಹಿದ್ ಅಫ್ರಿದಿ ಕೂಡ ಲೈವ್ ಟಿವಿ ಶೋನಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನದ ವಿಜಯದ ನಂತರ ಸಾಮಾ ಟಿವಿ ಶೋನಲ್ಲಿ ಅಫ್ರಿದಿಗೆ ಪಿಸಿಬಿ ಅಧ್ಯಕ್ಷರು ಬಾಬರ್ ಅಜಂ ಅವರ ವೈಯಕ್ತಿಕ ಸಂದೇಶವನ್ನು ವೈರಲ್ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, 'ಝಾಕಾ ಅಶ್ರಫ್ ಸಾಹಬ್ ಯಾವುದೇ ಕ್ಲಬ್‌ಗೆ ಸೇರಿದವರಲ್ಲ, ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸೇರಿದವರು, ಅದೂ ಅಲ್ಲದೆ ಅಧ್ಯಕ್ಷರಾಗಿದ್ದಾರೆ. ಅವರು ಬಹಳಷ್ಟು ವಿಷಯಗಳನ್ನು ನೋಡಬೇಕು. ಮಾಧ್ಯಮ ಸಂಸ್ಥೆಗಳ ಮಾಲೀಕರಿಗೆ ಕರೆ ಮಾಡಿ ನನ್ನ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ನೀವು ಅಧ್ಯಕ್ಷರು... ನೀವು ಪಾಕಿಸ್ತಾನದ ಕ್ರಿಕೆಟ್‌ನ ಉನ್ನತಿಗಾಗಿ ಕೆಲಸ ಮಾಡುತ್ತೀರಿ. ಝಾಕಾ ಅಶ್ರಫ್ ಸಾಹೇಬ್, ನೀವು ಅವರಿಗೆ ಅವಕಾಶ ನೀಡುತ್ತಿರುವುದರಿಂದ ಜನರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಇನ್ನು ಅಫ್ರಿದಿ, 'ಪಾಕಿಸ್ತಾನ ತಂಡ ವಿಶ್ವಕಪ್ ಆಡುತ್ತಿದೆ. ಝಾಕಾ ಅಶ್ರಫ್ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಕೆಲವೊಮ್ಮೆ ಅವರು ಬಾಬರ್ ಬಗ್ಗೆ ಏನಾದರೂ ಹೇಳಿದರೆ. ಕೆಲವೊಮ್ಮೆ ಅವರು ಬೇರೆಯವರ ಬಗ್ಗೆ ಹೇಳುತ್ತಾರೆ. ಮೊದಲು ನಿಮ್ಮ ಕುರ್ಚಿಯನ್ನು ಬಲಗೊಳಿಸಿ. ನಾವು ಕ್ರಿಕೆಟಿಗರು ನಿಮ್ಮಿಂದ ಹೊಂದಿರುವ ನಿರೀಕ್ಷೆಗಳನ್ನು ಈಡೇರಿಸಿ ಮತ್ತು ಪಾಕಿಸ್ತಾನದ ಕ್ರಿಕೆಟ್‌ನ ಉನ್ನತಿಗಾಗಿ ಕೆಲಸ ಮಾಡಿ ಅಫ್ರಿದಿ ಚಾಟಿ ಬೀಸಿದ್ದಾರೆ.

ಈ ಹಿಂದೆ, ಈ ಮಾಜಿ ಪಾಕಿಸ್ತಾನಿ ನಾಯಕ ಟಿವಿಯಲ್ಲಿ ಬಾಬರ್ ಅಜಂ ಅವರ ವೈಯಕ್ತಿಕ ಸಂದೇಶಗಳನ್ನು ತೋರಿಸಿದ್ದಕ್ಕಾಗಿ ಪಾಕಿಸ್ತಾನಿ ಮಾಧ್ಯಮವನ್ನು ಛೀಮಾರಿ ಹಾಕಿದ್ದರು. ಇದೊಂದು ಕೆಟ್ಟ ಕೃತ್ಯ ಎಂದು ನಾನು ಹೇಳುತ್ತೇನೆ ಎಂದು ಅಫ್ರಿದಿ ಹೇಳಿದ್ದರು. ಹೀಗಾಗಬಾರದಿತ್ತು. ನಾವೇ ನಮ್ಮ ದೇಶಕ್ಕೆ ಮಾನಹಾನಿ ಮಾಡುತ್ತಿದ್ದೇವೆ. ಯಾರೊಬ್ಬರ ಖಾಸಗಿ ಸಂದೇಶಗಳನ್ನು ಟಿವಿಯಲ್ಲಿ ಈ ರೀತಿ ತೋರಿಸುವುದು ಸರಿಯೇ ಎಂದು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com