ICC World Cup 2023: ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಜಯ; ಫೈನಲ್ ಪ್ರವೇಶಿಸಿದ ಭಾರತ

2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫೈನಲ್ ಪ್ರವೇಶಿಸಿದೆ. 
ಟೀಂ ಇಂಡಿಯಾ ತಂಡ
ಟೀಂ ಇಂಡಿಯಾ ತಂಡ

ಮುಂಬೈ: 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫೈನಲ್ ಪ್ರವೇಶಿಸಿದೆ. 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಶತಕದ ನೆರವಿನಿಂದ ಭಾರತ 397 ರನ್ ಪೇರಿಸಿತ್ತು. ಭಾರತ ನೀಡಿದ 398 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 327 ರನ್ ಗಳಿಗೆ ಆಲೌಟ್ ಆಯಿತು.

ಇನ್ನು ನ್ಯೂಜಿಲ್ಯಾಂಡ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿತ್ತು. ನಾಯಕ ಕೇನ್ ವಿಲಿಯಮ್ಸನ್ ಮತ್ತು ಮಿಚೆಲ್ ಮೂರನೇ ವಿಕೆಟ್ ಗೆ 181 ರನ್ ಗಳ ಜೊತೆಯಾಟ ನೀಡಿದರು. ಈ ವೇಳೆ ಭಾರತ ಸ್ವಲ್ಪ ಹಿನ್ನಡೆ ಅನುಭವಿಸಿತ್ತು. ಈ ವೇಳೆ ವೇಗಿ ಮೊಹಮ್ಮದ್ ಶಮಿ 69 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವರನ್ನು ಒಂದೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ಭಾರತಕ್ಕೆ ಸ್ವಲ್ಪ ಚೇತರಿಕೆ ತಂದುಕೊಟ್ಟರು.

ಇನ್ನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಡೇರಿಲ್ ಮಿಚೆಲ್ 119 ಎಸೆತಗಳಲ್ಲಿ 134 ರನ್ ಪೇರಿಸಿದ್ದಾಗ ಶಮಿ ಔಟ್ ಮಾಡಿದರು. ನಂತರ ಪಂದ್ಯ ಸಂಪೂರ್ಣವಾಗಿ ಭಾರತದ ಕಡೆ ವಾಲಿತು. ಅಂತಿಮವಾಗಿ ನ್ಯೂಜಿಲ್ಯಾಂಡ್ 327 ರನ್ ಗಳಿಗೆ ಆಲೌಟ್ ಆಗುವ ಮೂಲಕ 70 ರನ್ ಗಳಿಂದ ಭಾರತಕ್ಕೆ ಶರಣಾಯಿತು. ಭಾರತ ಪರ ಶಮಿ 7 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 47 ರನ್​ ಹಾಗೂ ಶುಭ್​ಮನ್ ಗಿಲ್ ಅಜೇಯ 80 ರನ್ ಬಾರಿಸಿದರು. ವಿರಾಟ್ ಕೊಹ್ಲಿ 117 ರನ್ ಹಾಗೂ ಶ್ರೇಯಸ್ ಅಯ್ಯರ್ 105 ರನ್​ ಗಳಿಸುವ ಮೂಲಕ ಇಬ್ಬರೂ ಶತಕದ ಜೊತೆಯಾಟವನ್ನು ಹಂಚಿಕೊಂಡರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ ಮೂರು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಏಕೈಕ ವಿಕೆಟ್ ಪಡೆದರು.

2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ಓಟ ಮುಂದುವರೆಸಿದೆ ಆಡಿದ 10 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com