ICC World Cup 2023: ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿಗೆ ಕಾರಣಗಳು!

ಭಾರತ ಕ್ರಿಕೆಟ್​ ತಂಡದ ವಿಶ್ವಕಪ್​ (ICC World Cup 2023) ಗೆಲ್ಲುವ ಆಸೆ ಭಗ್ನಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ಭಾರತ ತಂಡ ಫೈನಲ್ ನಲ್ಲಿ ಸೋಲಲು ಕಾರಣವಾದ ಅಂಶಗಳು ಇಲ್ಲಿವೆ.
ಭಾರತ vs ಆಸ್ಟ್ರೇಲಿಯಾ ನಡುವಿನ ಪಂದ್ಯ
ಭಾರತ vs ಆಸ್ಟ್ರೇಲಿಯಾ ನಡುವಿನ ಪಂದ್ಯ

ಅಹ್ಮದಾಬಾದ್​: ಭಾರತ ಕ್ರಿಕೆಟ್​ ತಂಡದ ವಿಶ್ವಕಪ್​ (ICC World Cup 2023) ಗೆಲ್ಲುವ ಆಸೆ ಭಗ್ನಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ಭಾರತ ತಂಡ ಫೈನಲ್ ನಲ್ಲಿ ಸೋಲಲು ಕಾರಣವಾದ ಅಂಶಗಳು ಇಲ್ಲಿವೆ.

ಪಿಚ್ ಮರ್ಮ ಅರಿಯುವಲ್ಲಿ ವಿಫಲ
ಪಂದ್ಯದ ಆರಂಭಕ್ಕೂ ಮುನ್ನ ಸಾಕಷ್ಟು ಮಾಧ್ಯಮಗಳಲ್ಲಿ ಪಿಚ್ ಬಗ್ಗೆ ವರದಿಯಾಗಿತ್ತು. ಪಿಚ್ ಬೌಲಿಂಗ್ ಮತ್ತು ಬ್ಯಾಟಿಂಗ್ ಗೆ ಸಮನಾದ ಅವಕಾಶವಿದೆ ಎಂದು ಹೇಳಿತ್ತು. ಹೀಗಾಗಿ ಇಲ್ಲಿ ಟಾಸ್ ಅತ್ಯಂತ ಪ್ರಮುಖವಾಗಿತ್ತು. ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ನೇರವಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಈ ನಿರ್ಧಾರ ಹಲವರಿಗೆ ಅಚ್ಚರಿ ತಂದಿತ್ತು. ಟಾಸ್‌ಗೆ ಮುನ್ನ ಹೆಚ್ಚಿನ ತಜ್ಞರು ಕೂಡ ಮೊದಲು ಬ್ಯಾಟಿಂಗ್ ಮಾಡುವುದು ಸೂಕ್ತ ಎಂದು ಎಣಿಸಿದ್ದರು. ಆದರೆ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಇದೇ ವಿಚಾರವಾಗಿ ಮಾತನಾಡಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಾವು ಟಾಸ್ ಗೆದಿದ್ದರೆ ಮೊದಲು ಬ್ಯಾಟಿಂಗ್ ಮಾಡುವ ಯೋಜನೆ ಇತ್ತು ಎಂದು ಹೇಳಿದ್ದರು. ಆದರೆ ಅಲ್ಲಿ ರೋಹಿತ್ ಯೋಜನೆ ಉಲ್ಟಾ ಹೊಡೆದಿತ್ತು.

ಪಿಚ್ ಮರ್ಮ ಅರಿಯುವಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದರು. ಪಂದ್ಯದ ಫಲಿತಾಂಶ ಇದನ್ನು ಸಾಬೀತು ಮಾಡಿದ್ದು, ಪಿಚ್‌ನ ವರ್ತನೆ ಪ್ಯಾಟ್ ಕಮ್ಮಿನ್ಸ್ ರ ನಿರ್ಧಾರವನ್ನು ಸಮರ್ಥಿಸುವಂತಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್ ಮಾಡಲು ಸುಲಭವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಬೌಂಡರಿಗಳು ಸುಲಭವಾಗಿರಲಿಲ್ಲ. ಇಲ್ಲಿ ಇಬ್ಬನಿ ಪಾತ್ರವನ್ನು ವಹಿಸದಿದ್ದರೂ, ಬೆಳಕಿನ ಅಡಿಯಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿತ್ತು. ಚೆನ್ನೈ ಮೇಲ್ಮೈಯಲ್ಲಿ ಬೆಳಕಿನ ಅಡಿಯಲ್ಲಿ ಬ್ಯಾಟಿಂಗ್ ಸುಲಭವಾಗಿತ್ತು ಎಂದು ಪ್ಯಾಟ್ ಕಮಿನ್ಸ್ ಗಮನಿಸಿದ್ದರು ಮತ್ತು ಅದು ನಿಧಾನಗತಿಯ ಪಿಚ್ ಆಗಿತ್ತು.

ಕೊಹ್ಲಿ-ರಾಹುಲ್‌ ನಿಧಾನಗತಿ ಬ್ಯಾಟಿಂಗ್
ಇಡೀ ವಿಶ್ವಕಪ್ ಟೂರ್ನಿಯಲ್ಲಿ ಹೈಲೈಟ್ ಆಗಿದ್ದು ಭಾರತ ತಂಡದ ಬ್ಯಾಟಿಂಗ್ ಬೆಂಬಲ. ಆದರೆ ಫೈನಲ್ ಪಂದ್ಯದಲ್ಲಿ ಅದೇ ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಭಾರತ ತಂಡದ ಇನ್ನಿಂಗ್ಸ್ ವೇಳೆ 40 ಓವರ್‌ಗಳಲ್ಲಿ ಕೇವಲ ನಾಲ್ಕು ಬೌಂಡರಿಗಳು ಮಾತ್ರ ಬಂದಿದ್ದು, ಭಾರತದ ಬ್ಯಾಟರ್‌ಗಳ ಮೇಲೆ ಆಸ್ಟ್ರೇಲಿಯಾದ ಪ್ರಾಬಲ್ಯ ಅಥವಾ ನಂತರದವರ ಅಲ್ಟ್ರಾ-ರಕ್ಷಣಾತ್ಮಕ ವಿಧಾನವನ್ನು ಸೂಚಿಸುತ್ತವೆ. ಭಾರತ ತನ್ನ ಮೊದಲ ಮೂರು ವಿಕೆಟ್‌ಗಳನ್ನು 81 ರನ್‌ಗಳಿಗೆ ಕಳೆದುಕೊಂಡು ಅತೀವ ಒತ್ತಡಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ್ದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ 67 ರನ್‌ಗಳ ಜೊತೆಯಾಟವಾಡಿತು. ಆದರೆ ಅದಕ್ಕಾಗಿ ಈ ಜೋಡಿ 109 ಎಸೆತಗಳನ್ನು ತೆಗೆದುಕೊಂಡಿತು. ಅವರು ಸತತ 97 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಲಿಲ್ಲ. ಮೊದಲ 10 ಓವರ್‌ಗಳಲ್ಲಿ 80 ರನ್ ಗಳಿಸಿದ ಭಾರತ ಉಳಿದ 40 ಓವರ್‌ಗಳಲ್ಲಿ 160 ರನ್ ಗಳನ್ನು ಮಾತ್ರ ಕಲೆ ಹಾಕಿತು. ಇದು ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಬ್ಯಾಟಿಂಗ್ ವೈಫಲ್ಯ
ಭಾರತದ ಬ್ಯಾಟರ್‌ಗಳು ತಮ್ಮ ಸ್ಕೋರಿಂಗ್ ಆಯ್ಕೆಗಳನ್ನು ಅನ್ವೇಷಿಸಲಿಲ್ಲ. ಇದು ಆಸಿಸ್ ಇನ್ನಿಂಗ್ಸ್ ವೇಳೆ ಸಾಬೀತಾಯಿತು. ತಂಡ ಸಂಕಷ್ಟದಲ್ಲಿದ್ದಾಗ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಲಬಶೇನ್ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು. ತಂಡ ಯಾವಾಗ ಒತ್ತಡಕ್ಕೆ ಸಿಲುಕುತ್ತಿದೆ ಎಂದೆನಿಸುತ್ತದೆಯೋ ಆಗ ಅವರು ಬೌಂಡರಿ ಬಾರಿಸಿ ತಂಡದ ಮೇಲಿನ ಒತ್ತಡವನ್ನು ಎದುರಾಳಿ ತಂಡದ ಮೇಲೆ ಹೇರುತ್ತಿದ್ದರು. ಬೌಂಡರಿ ಸಾಧ್ಯವಾಗದಿದ್ದಾಗ ಒತ್ತಡವನ್ನು ದೂರವಿಡಲು ಅವರು ನಿಯಮಿತ ಸಿಂಗಲ್ಸ್ ಮತ್ತು ಡಬಲ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಭಾರತದ ಇನ್ನಿಂಗ್ಸ್ ವೇಳೆ ಇದು ಆಗಲಿಲ್ಲ. ಒತ್ತಡವನ್ನು ದೂರವಿಡಲು ಅವರು ನಿಯಮಿತ ಸಿಂಗಲ್ಸ್ ಮತ್ತು ಡಬಲ್ಸ್‌ಗಳನ್ನು ತೆಗೆದುಕೊಳ್ಳಲಿಲ್ಲ.

ಇದನ್ನೇ ಆಸಿಸ್ ಬೌಲರ್ ಗಳು ಬಂಡವಾಳ ಮಾಡಿಕೊಂಡು ಮತ್ತಷ್ಟು ಬಿಗಿ ಬೌಲಿಂಗ್ ಮಾಡಿ ತಂಡದ ಮೇಲಿನ ಒತ್ತಡ ಹೆಚ್ಚಿಸಿದರು. ಇದು ಭಾರತ ತಂಡ ನಿಯಮಿತ ವಿಕೆಟ್ ಕಳೆದುಕೊಳ್ಳಲು ಕಾರಣವಾಯಿತು. 47 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ನಂತರ ಆಸ್ಟ್ರೇಲಿಯಾ ಕೂಡ ಒತ್ತಡಕ್ಕೆ ಸಿಲುಕಿತು, ಆದರೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಕೇವಲ 215 ಎಸೆತಗಳಲ್ಲಿ 192 ರನ್‌ಗಳ ಜೊತೆಯಾಟ ನಡೆಸಿ ತಂಡದ ಗೆಲುವಿಗೆ ಕಾರಣರಾದರು.

ಒತ್ತಡ ನಿಭಾಯಿಸುವಲ್ಲಿ ವೈಫಲ್ಯ
ದಕ್ಷಿಣ ಆಫ್ರಿಕಾವನ್ನು ದೀರ್ಘಕಾಲಿಕ ಚೋಕರ್ಸ್ ಎಂದು ಕರೆಯಲಾಗುತ್ತದೆ, ಆದರೆ ಕಳೆದ 10 ವರ್ಷಗಳಲ್ಲಿ ಭಾರತ ತಂಡ ಕೂಡ ಇಂತಹುದೇ ಸ್ಪರ್ಧೆಯಲ್ಲಿದೆ. 2014 T20 ವಿಶ್ವಕಪ್ ಫೈನಲ್, 2015ರ ಏಕದಿನ ವಿಶ್ವಕಪ್ ಸೆಮಿಫೈನಲ್, 2016 T20 ವಿಶ್ವಕಪ್ ಸೆಮಿಫೈನಲ್, 2017 ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ವಿಶ್ವಕಪ್ ಸೆಮಿಫೈನಲ್, WTC ಫೈನಲ್ 2021 ಮತ್ತು 2023, ಮತ್ತು 2022 T20 ವಿಶ್ವ ಸೆಮಿಫೈನಲ್ ಈ ಪ್ರತಿಯೊಂದು ನಾಕೌಟ್ ಪಂದ್ಯಗಳಲ್ಲಿ ಭಾರತ ತಂಡ ಸೋತಿದೆ. ಇದು ಭಾರತ ತಂಡ ನಿರ್ಣಾಯಕ ಹಂತದಲ್ಲಿ ಒತ್ತಡದ ಸಂದರ್ಭಗಳನ್ನು ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂದಿನ ಪಂದ್ಯದಲ್ಲೂ ಆರಂಭದಲ್ಲಿ ಕೇವಲ 4 ಓವರ್ ಗಳಲ್ಲಿ 41 ರನ್ ನೀಡಿತ್ತು. ಬಳಿಕ 3 ವಿಕೆಟ್ ಕಬಳಿಸಿತಾದರೂ ಅದೇ ರೀತಿಯ ಪ್ರದರ್ಶನ ಮುಂದುವರೆಯಲಿಲ್ಲ. ಬೌಲಿಂಗ್ ನಲ್ಲಿ ಭಾರತ ತಂಡದ ವೇಗಿಗಳು ಲೈನ್ ಅಂಡ್ ಲೆಂಥ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು. 

ರೋಹಿತ್ ಶರ್ಮಾ ವಿಕೆಟ್
ಭಾರತದ ಇನ್ನಿಂಗ್ಸ್ ಆರಂಭದಲ್ಲಿ ರೋಹಿತ್ ಶರ್ಮಾ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಇನ್ನಿಂಗ್ಸ್ ನ 10ನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ 10 ರನ್ ಗಳಿಸಿದ್ದ ರೋಹಿತ್ ಶರ್ಮಾ, ಒಂದೇ ಒಂದು ತಪ್ಪಾದ ಶಾಟ್ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು. ಪವರ್‌ಪ್ಲೇ ಅಂತ್ಯಕ್ಕೆ ಇನ್ನೂ ಮೂರು ಎಸೆತಗಳು ಉಳಿದಿರುವಾಗ, ರೋಹಿತ್ ಶರ್ಮಾ ತನ್ನ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಬಾರಿಗೆ ಬೌಂಡರಿ ಸಿಡಿಸಲು ಮುಂದಾದರು. ಆದರೆ ಟ್ರಾವಿಸ್ ಹೆಡ್‌ ಗೆ ಕ್ಯಾಚ್ ನೀಡಿ ಔಟಾದರು. ಒಂದು ವೇಳೆ ರೋಹಿತ್ ಶರ್ಮಾ ಇನ್ನೊಂದು ಐದು ಓವರ್ ಕ್ರೀಸ್ ನಲ್ಲೇ ಉಳಿದಿದ್ದರೆ ಬಹುಶಃ ಭಾರತ ತಂಡದ ಮೊತ್ತ ವಿಭಿನ್ನವಾಗಿರುತ್ತಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಶ್ರೇಯಸ್ ಅಯ್ಯರ್ ಮತ್ತು ಶುಭ್ ಮನ್ ಗಿಲ್ ಬೇಗನೆ ವಿಕೆಟ್ ನೀಡಿದ್ದು ತಂಡದ ವೈಫಲ್ಯಕ್ಕೆ ಮತ್ತೊಂದು ಕಾರಣ.

ಭಾರತ ತಂಡಕ್ಕೆ ಕೈಕೊಟ್ಟ ಅದೃಷ್ಟ
ಭಾರತ ತಂಡಕ್ಕೆ ‘30 ನಿಮಿಷ’ ಕೆಟ್ಟ ಕ್ರಿಕೆಟ್ ನ ಭೀತಿ ಇದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಈ ಭೀತಿ ಇರಲಿಲ್ಲ. ಆದಾಗ್ಯೂ ಭಾರತ ಸೋತಿದೆ. ಕಾರಣ ಅದೃಷ್ಟ ಕೈಕೊಟ್ಟಿದ್ದು. ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ನೀಡಿದ್ದ ಕಷ್ಟಕರ ಕ್ಯಾಚ್ ಅನ್ನು ಟ್ರಾವಿಸ್ ಹೆಡ್ ಮುಮ್ಮುಖವಾಗಿ ಓಡಿ ಅದ್ಭುತವಾಗಿ ಹಿಡಿದರು. ಇದೊಂದು ಉದಾಹರಣೆಯಾದರೆ ಬೌಲಿಂಗ್ ವೇಳೆ ಜಸ್ ಪ್ರೀತ್ ಬುಮ್ರಾ ಎಸೆದ ಎಸೆತವೊಂದು ಶತಕ ಸಿಡಿಸಿ ಆಸಿಸ್ ತಂಡಕ್ಕೆ ಗೆಲುವು ತಂದಿತ್ತ ಇದೇ ಟ್ರಾವಿಸ್ ಹೆಡ್ ರ ವಿಕೆಟ್ ಬೀಳುವಂತೆ ಮಾಡುತ್ತಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಚೆಂಡು ವಿಕೆಟ್ ಪಕ್ಕದಲ್ಲಿ ಸಾಗಿತ್ತು. ಮತ್ತೊಂದು ಉದಾಹರಣೆ ಕೊಹ್ಲಿ ವಿಕೆಟ್.. ಹೌದು.. ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಎಸೆದ ಚೆಂಡನ್ನು ಕೊಹ್ಲಿ ರಕ್ಷಣಾತ್ಮಕವಾಗಿ ಆಡಿದ್ದರು. ಆದರೆ ಚೆಂಡು ನೆಲಕ್ಕೆ ಅಪ್ಪಳಿಸಿ ವಿಕೆಟ್ ಬೇಲ್ಸ್ ಎಗರಿಸಿತ್ತು. ಇದೂ ಕೂಡ ಭಾರತ ತಂಡದ ದುರಾದೃಷ್ಟ ಎನ್ನಬಹುದು.

ಆಸ್ಟ್ರೇಲಿಯಾ ತಂಡದ ಫೀಲ್ಡಿಂಗ್
ಇಡೀ ಪೈನಲ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಆಸ್ಟ್ರೇಲಿಯಾ ತಂಡದ ಅದ್ಭುತ ಫೀಲ್ಡಿಂಗ್. ಪ್ಯಾಟ್ ಕಮಿನ್ಸ್ ಅದ್ಭುತ ಯೋಜನೆಯೊಂದಿಗೇ ಫೀಲ್ಡಿಗೆ ಇಳಿದಿದ್ದರು. ಇಂದಿನ ಪಂದ್ಯದಲ್ಲಿ ಅವರು ಕನಿಷ್ಠ 35 ರಿಂದ 40 ರನ್‌ಗಳನ್ನು ಅದ್ಭುತ ಫೀಲ್ಡಿಂಗ್ ಮೂಲಕ ತಡೆದಿದ್ದಾರೆ. ಆದರೆ ಇದೇ ರೀತಿಯ ಫೀಲ್ಡಿಂಗ್ ಚಾಕಚಕ್ಯತೆ ಭಾರತ ತಂಡದಲ್ಲಿ ಕಾಣಲಿಲ್ಲ. ಆಸ್ಟ್ರೇಲಿಯಾ ಎಕ್ಸ್ ಟ್ರಾ ರೂಪದಲ್ಲಿ 12 ರನ್ ಗಳನ್ನು ಮಾತ್ರ ನೀಡಿದರೆ, ಭಾರತ 18 ರನ್ ನೀಡಿದೆ. ಇದಕ್ಕೆ ಭಾರತ ತಂಡದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಬಿಟ್ಟ ಒಂದರೆಡು ಬೌಂಡರಿಗಳು ಕೂಡ ಸೇರಿಸಿದರೆ ಈ ಮೊತ್ತ ಇನ್ನೂ ಹೆಚ್ಚಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com