ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 6 ರನ್ ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 266ರನ್ ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು.
ರೋಹಿತ್ ಶರ್ಮಾ ಬೆನ್ನಲ್ಲೇ ತಿಲಕ್ ವರ್ಮಾ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳದೇ ಕೇವಲ 5ರನ್ ಗಳಿಸಿ ಔಟಾದರು. ನಂತರ ಗಿಲ್ ಜೊತೆಗೂಡಿದ ಕೆಎಲ್ ರಾಹುಲ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ವಿಶ್ವಾಸ ಮೂಡಿಸಿದ್ದರಾದರೂ 39 ರನ್ ಗಳಿಗೆ 19 ರನ್ ಗಳಿಸಿ ಮೆಹೆದಿ ಹಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಸೂರ್ಯ ಕುಮಾರ್ ಯಾದವ್ 26ರನ್ ಗಳಿಸಿದರೆ, ರವೀಂದ್ರ ಜಡೇಜಾ ಕೇವಲ 7ರನ್ ಗಳಿಸಿ ಔಟಾದರು. ಬಳಿಕ ಗಿಲ್ ಜೊತೆಗೂಡಿದ ಅಕ್ಸರ್ ಪಟೇಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಹಂತದಲ್ಲಿ ಶುಭ್ ಮನ್ ಗಿಲ್ ಶತಕ ಸಿಡಿಸಿದ್ದು ಮಾತ್ರವಲ್ಲದೇ 2023ರಲ್ಲಿ ಸಾವಿರ ರನ್ ಪೂರೈಸಿದರು. ಶತಕ ಸಿಡಿಸಿದ ಬಳಿಕ ಗಿಲ್ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಒಂದು ಹಂತದಲ್ಲಿ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ 121ರನ್ ಗಳಿಸಿದ್ದ ಗಿಲ್ ಹಸನ್ ಬೌಲಿಂಗ್ ನಲ್ಲಿ ಔಟಾದರು. ಅಂತಿಮವಾಗಿ ಭಾರತ ತಂಡ 49.5 ಓವರ್ ನಲ್ಲಿ 259ರನ್ ಗಳಿಸಿ 6 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಈ ಸೋಲಿನ ಹೊರತಾಗಿಯೂ ಭಾರತ ಫೈನಲ್ ಗೇರಿದ್ದು, ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
Advertisement