ಮೊದಲ ಟೆಸ್ಟ್: ಭಾರತ ಕಳಪೆ ಬ್ಯಾಟಿಂಗ್; ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ ಹೀನಾಯ ಸೋಲು
ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲೂ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಹರಿಣಗಳ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ ಗಳ ಹೀನಾಯ ಸೋಲು ಕಂಡಿದೆ.
ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ 408 ರನ್ ಬಾರಿಸಿ 163 ರನ್ಗಳ ಮುನ್ನಡೆ ಸಾಧಿಸಿತು. ಆಫ್ರಿಕಾ ಪರ ಡೀನ್ ಎಲ್ಗರ್(185) ಮತ್ತು ವೇಗಿ ಮಾರ್ಕೊ ಜಾನ್ಸೆನ್(ಅಜೇಯ 84) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
163 ರನ್ ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮತ್ತೆ ಆಫ್ರಿಕನ್ ವೇಗಿಗಳ ಮಾರಕ ದಾಳಿಗೆ ಸಿಲುಕಿ ಕೇವಲ 131ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ವಿರಾಟ್ ಕೊಹ್ಲಿ (76 ರನ್) ಮತ್ತು ಶುಭ್ ಮನ್ ಗಿಲ್ (26 ರನ್) ರನ್ನು ಹೊರತು ಪಡಿಸಿದರೆ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಕೆಎಲ್ ರಾಹುಲ್ ಸಹಿತ ತಂಡದ ಉಳಿದಾವ ಆಟಗಾರರಿಂದಲೂ ಎರಡಂಕಿ ಮೊತ್ತ ಬರಲಿಲ್ಲ. ನಾಯಕ ರೋಹಿತ್ ಶರ್ಮಾ ಶೂನ್ಯ ಸುತ್ತಿದರೆ, ಸ್ಫೋಟಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್ 5 ರನ್, ಶ್ರೇಯಸ್ ಅಯ್ಯರ್ 6, ಕೆಎಲ್ ರಾಹುಲ್ 4, ಅಶ್ವಿನ್ ಸೊನ್ನೆಗೆ ಔಟಾದರು.
ಅಂತಿಮವಾಗಿ ಭಾರತ ತಂಡ ಕೇವಲ 34.1 ಓವರ್ ನಲ್ಲಿ 131 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಹರಿಣಗಳ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ ಗಳ ಹೀನಾಯ ಸೋಲು ಕಂಡಿತು. ಆಫ್ರಿಕಾ ಪರ ಕಗಿಸೋ ರಬಾಡಾ 2, ನಂಡ್ರೆ ಬರ್ಜರ್ 4 ಮತ್ತು ಮಾರ್ಕೋ ಜೇನ್ಸನ್ 3 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ