ಕುಟುಂಬ ಸದಸ್ಯರಿಗೆ ಅನಾರೋಗ್ಯ: ಭಾರತ ಪ್ರವಾಸದ ನಡುವೆಯೇ ತವರಿಗೆ ತೆರಳಿದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್

ಹಾಲಿ ಭಾರತ ಪ್ರವಾಸದಲ್ಲಿರುವ ಆಸ್ಚ್ರೇಲಿಯಾ ಕ್ರಿಕೆಟ್ ಆಟಗಾರ ಪ್ಯಾಟ್ ಕಮಿನ್ಸ್ ಅನಿವಾರ್ಯ ಕಾರಣಗಳಿಂದಾಗಿ ಪ್ರವಾಸದ ನಡುವೆಯೇ ತವರಿಗೆ ವಾಪಸ್ ಆಗಿದ್ದಾರೆ.
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ನವದೆಹಲಿ: ಹಾಲಿ ಭಾರತ ಪ್ರವಾಸದಲ್ಲಿರುವ ಆಸ್ಚ್ರೇಲಿಯಾ ಕ್ರಿಕೆಟ್ ಆಟಗಾರ ಪ್ಯಾಟ್ ಕಮಿನ್ಸ್ ಅನಿವಾರ್ಯ ಕಾರಣಗಳಿಂದಾಗಿ ಪ್ರವಾಸದ ನಡುವೆಯೇ ತವರಿಗೆ ವಾಪಸ್ ಆಗಿದ್ದಾರೆ.

ಹೌದು.. ಪ್ಯಾಟ್ ಕಮಿನ್ಸ್ ಅವರ ಕುಟುಂಬ ಸದಸ್ಯರಿಗೆ ಅನಾರೋಗ್ಯದ ಕಾರಣದಿಂದಾಗಿ ಅವರು ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇದರ ಹೊರತಾಗಿಯೂ ಕಮಿನ್ಸ್ ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಬಾಕಿ ಎರಡು ಪಂದ್ಯಗಳಿಗೆ ಮರಳುವ ಸಾಧ್ಯತೆ ಇದೆ ಎಂದು 'cricket.com.au ವರದಿ ಮಾಡಿದೆ. ಕಮ್ಮಿನ್ಸ್ ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಮರಳುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಭಾನುವಾರ ಅಂತ್ಯವಾದ 2ನೇ ಟೆಸ್ಟ್ ಪಂದ್ಯ ಕೇವಲ ಮೂರೇ ದಿನದಲ್ಲಿ ಅಂತ್ಯವಾಗಿದ್ದು,  ಆ ಮೂಲಕ ಉಭಯ ತಂಡಗಳಿಗೆ 2 ದಿನ ಹೆಚ್ಚುವರಿ ವಿಶ್ರಾಂತಿ ಲಭಿಸಿದಂತಾಗಿದೆ. ಇಂದೋರ್‌ನಲ್ಲಿ ಮೂರನೇ ಟೆಸ್ಟ್ ಮಾರ್ಚ್ 1 ರಿಂದ ಆರಂಭವಾಗಲಿದ್ದು, ನಾಲ್ಕನೇ ಟೆಸ್ಟ್ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮಾರ್ಚ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 

ಇನ್ನು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಇಲ್ಲಿಯವರೆಗೆ ಪ್ರವಾಸದಲ್ಲಿ ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ವಿಫಲರಾಗಿದ್ದು, ಹೇಳಿಕೊಳ್ಳುವಂತಹ ಪ್ರದರ್ಶನ ಈವರೆಗೂ ಮೂಡಿಬಂದಿಲ್ಲ.. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡಲು ಹವಣಿಸುತ್ತಿದ್ದಾರೆ. ಇತ್ತ ದೆಹಲಿಯಲ್ಲಿ ಆರು ವಿಕೆಟ್‌ಗಳ ಜಯದೊಂದಿಗೆ, ಭಾರತವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸರಣಿ ಸಮಬಲಕ್ಕಾಗಿ ಕಾಂಗರೂಗಳು ಹೋರಾಟ ನಡೆಸಬೇಕಿದೆ. 2 ಪಂದ್ಯಗಳ ಪೈಕಿ ಒಂದು ಪಂದ್ಯ ಡ್ರಾ ಆದರೂ ಆಸಿಸ್ ಸರಣಿ ಕೈ ಚೆಲ್ಲಲಿದೆ.  

ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ದೆಹಲಿ ಟೆಸ್ಟ್‌ನಿಂದ ಹೊರಗುಳಿದ ನಂತರ ಅವರ ಫಿಟ್‌ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ವೇಳೆ ವಾರ್ನರ್ ಎಡ ಮೊಣಕೈಗೆ ಪೆಟ್ಟಾಗಿತ್ತು. ಹೀಗಾಗಿ ಹಾಲಿ ಸರಣಿ ಆಸ್ಟ್ರೇಲಿಯನ್ನರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com