ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆಘಾತ ಎದುರಾಗಿದ್ದು, ರೋಹಿತ್ ಪಡೆ ತನ್ನ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಎಸೆತದಲ್ಲೇ ಆಘಾತ ನೀಡಿದರು. ಹಿಂದಿನ ಪಂದ್ಯದ ಹೀರೋ ಯಶಸ್ವಿ ಜೈಸ್ವಾಲ್ ರನ್ನು ಗೋಲ್ಡನ್ ಡಕೌಟ್ ಮಾಡಿದರು. ಮೊದಲ ಎಸೆತದಲ್ಲೇ ಜೈಸ್ವಾಲ್ ಎಲ್ ಬಿ ಬಲೆಗೆ ಬಿದ್ದರು.
ಬಳಿಕ ಕೆಎಲ್ ರಾಹುಲ್ ಜೊತೆ ಗೂಡಿದ ಗಿಲ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ 2ನೇ ವಿಕೆಟ್ ಗೆ 69ರನ್ ಗಳ ಜೊತೆಯಾಟ ನೀಡಿತು. ಈ ವೇಳೆಗೆ 37ರನ್ ಗಳಿಸಿದ್ದ ರಾಹುಲ್ ಮತ್ತೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ಕೂಡ ಕೇವಲ 7ರನ್ ಗಳಿಸಿ ಮತ್ತೆ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು.
ಕೊಹ್ಲಿ ಬೆನ್ನಲ್ಲೇ 31ರನ್ ಗಳಿಸಿದ್ದ ಗಿಲ್ ಕೂಡ ಬೋಲಾಂಡ್ ಬೌಲಿಂಗ್ ನಲ್ಲಿ ವಿಕೆಟ್ ಕೈಚೆಲ್ಲಿದರು. ಈ ವೇಳೆ ಪಂತ್ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ 3 ರನ್ ಗಳಿಸಿ ಬೋಲಾಂಡ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಇತ್ತೀಚಿನ ವರದಿ ಬಂದಾಗ ಭಾರತ 5 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದು, 13 ರನ್ ಗಳಿಸಿರುವ ರಿಷಬ್ ಪಂತ್ ಮತ್ತು ಈಗಷ್ಟೇ ಕ್ರೀಸ್ ಗೆ ಬಂದಿರುವ ನಿತೀಶ್ ರೆಡ್ಡಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಪರ ಸ್ಟಾರ್ಕ್ 3 ಮತ್ತು ಬೋಲಾಂಡ್ 2 ವಿಕೆಟ್ ಪಡೆದಿದ್ದಾರೆ.
Advertisement