
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಭಾರತ 4 ವಿಕೆಟ್ ನಷ್ಟಕ್ಕೆ 51ರನ್ ಗಳಿಸಿದ್ದು, ಕೆಎಸ್ ರಾಹುಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಕೇವಲ 51ರನ್ ಗಳಿಗೇ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತಕ್ಕೆ ಮತ್ತೆ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದರು. ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸ್ಟಾರ್ಕ್ ವಿರುದ್ಧ ಮತ್ತೆ ಮುಗ್ಗರಿಸಿದ್ದು ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶುಭ್ ಮನ್ ಗಿಲ್ ಕೂಡ ಬಂದಷ್ಟೇ ವೇಗವಾಗಿ 1 ರನ್ ಗಳಿಸಿ ಮತ್ತೆ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕೂಡ 3 ರನ್ ಗಳಿಸಿ ಹೇಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರೆ, ರಿಷಬ್ ಪಂತ್ ಗಳಿಕೆ ಕೇವಲ 9 ರನ್ ಗಳಿಗೇ ಸೀಮಿತವಾಯಿತು.
ಆ ಮೂಲಕ ಅಂತಿಮವಾಗಿ ಭಾರತ ತಂಡ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 51ರನ್ ಕಲೆಹಾಕಿದೆ. ಅಂತೆಯೇ ಭಾರತ ಇನ್ನೂ 394 ರನ್ ಹಿನ್ನಡೆಯಲ್ಲಿದೆ. 33ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು ಇನ್ನೂ ಖಾತೆ ತೆರೆಯದ ನಾಯಕ ರೋಹಿತ್ ಶರ್ಮಾ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್ ಪಡೆದರೆ, ಹೇಜಲ್ ವುಡ್ ಮತ್ತು ಕಮಿನ್ಸ್ ತಲಾ 1 ವಿಕೆಟ್ ಪಡೆದರು.
ಕೆಎಲ್ ರಾಹುಲ್ ಏಕಾಂಗಿ ಹೋರಾಟ
ಇನ್ನು ಇಂದಿನ ದಿನದಾಟದಲ್ಲಿ ಭಾರತದ ಪರ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದರು. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೆ ಮತ್ತೊಂದೆಡೆ ತಮ್ಮ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದ ಕೆಎಲ್ ರಾಹುಲ್, 64 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 33 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
Advertisement