
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನ ಆಸ್ಚ್ರೇಲಿಯಾಗೆ ಬಹುದೊಡ್ಡ ಹಿನ್ನಡೆಯಾಗಿದ್ದು, ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಟ್ರಾವಿಸ್ ಹೆಡ್ ಗಾಯಕ್ಕೆ ತುತ್ತಾಗಿದ್ದಾರೆ.
ಹೌದು.. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಈ ಪಂದ್ಯ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಗಾಯಗೊಂಡಿದ್ದಾರೆ.
ಟ್ರಾವಿಸ್ ಹೆಡ್ ತೊಡೆಸಂದು ಸಮಸ್ಯೆಯಿಂದ ಬಳಲುತ್ತಿದ್ದು, ಅವರೀಗ 4ನೇ ಟೆಸ್ಟ್ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ನಿಂದ ಹೊರಗುಳಿಯಬಹುದು ಎಂದು ಹೇಳಲಾಗುತ್ತಿದೆ. 3ನೇ ಟೆಸ್ಟ್ ಪಂದ್ಯದ 5ನೇ ದಿನದಂದು ಟ್ರಾವಿಸ್ ಹೆಡ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದು, ಹೆಡ್ ತೀವ್ರ ನೋವಿನಿಂದ ಬಳಲುತ್ತಿದ್ದರು ಮತ್ತು ನಡೆಯುವಾಗ ಕುಂಟುತ್ತಾ ನಡೆಯುತ್ತಿದ್ದರು.
ಹೀಗಾಗಿ ಹೆಡ್ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಆತಂಕ ಕಾಡುತ್ತಿದ್ದು ಒಂದು ವೇಳೆ ಟ್ರಾವಿಸ್ ಹೆಡ್ ಹೊರಗುಳಿದರೆ ಆಸ್ಟ್ರೇಲಿಯಾ ತಂಡಕ್ಕೆ ಬಹುದೊಡ್ಡ ಆಘಾತ ಎದುರಾದಂತಾಗುತ್ತದೆ. ಅಂತೆಯೇ ಸರಣಿಯಲ್ಲಿ ಭಾರತಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗುತ್ತದೆ.
ರೋಹಿತ್ ಪಡೆಗೆ ತಲೆನೋವಾಗಿದ್ದ 'ಹೆಡ್'
ಹಾಲಿ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಹೆಡ್, ಆಡಿರುವ ಮೂರು ಪಂದ್ಯಗಳಲ್ಲಿ 81.80 ಸರಾಸರಿಯಲ್ಲಿ 409 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿದ್ದು, ಅವರು ಪರ್ತ್‌ನಲ್ಲಿ 89 ರನ್‌ಗಳ ಇನ್ನಿಂಗ್ಸ್ ಕೂಡ ಆಡಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ಹೆಡ್ ಇಲ್ಲದಿದ್ದರೆ, ಆಸ್ಟ್ರೇಲಿಯದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಹೀಗಾಗಿ ಹೆಡ್ ಅಲಭ್ಯತೆಯ ಲಾಭವನ್ನು ಭಾರತೀಯ ಬೌಲರ್‌ಗಳು ಖಂಡಿತವಾಗಿಯೂ ಪಡೆಯಬಹುದು.
ಹೆಡ್ ಗುಣಮುಖರಾಗುತ್ತಾರೆ: ಆಸಿಸ್ ನಾಯಕನ ವಿಶ್ವಾಸ
ಇನ್ನು ಪಂದ್ಯ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, 'ಹೆಡ್ ಚೆನ್ನಾಗಿದ್ದೇನೆ ಮತ್ತು ಪೂರ್ಣ ಫಿಟ್ನೆಸ್ ಆಗಲು ಸ್ವಲ್ಪ ವಿಶ್ರಾಂತಿ ಅಗತ್ಯವಿದೆ. ಮೆಲ್ಬೋರ್ನ್ ಪಂದ್ಯದ ಹೊತ್ತಿಗೆ ಟ್ರಾವಿಸ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಣಿಯಿಂದಲೇ Hazlewood ಔಟ್
ಇದೇ ವೇಳೆ ಜೋಶ್ ಹೇಜಲ್ ವುಡ್ ಕುರಿತು ಮಾತನಾಡಿದ ಕಮಿನ್ಸ್, ಜೋಶ್ ಈ ಸರಣಿಯ ಬಾಕಿ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಅವರು ಚೇತರಿಸಿಕೊಳ್ಳಲು ಕೆಲವು ವಾರಗಳೇ ಬೇಕಾಗಬಹುದು. ಅಲ್ಲಿಂದ ಮತ್ತೆ ಕ್ರಿಕೆಟ್ ಗಾಗಿ ತಯಾರಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
Advertisement