
ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯಕ್ಕೆ ಸಿದ್ಧತೆ ನಡೆಸಿರುವ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಗಾಯಗೊಂಡಿದ್ದಾರೆ.
ಹೌದು.. ಈಗಾಗಲೇ ಸರಣಿ ಮೂರನೇ ಪಂದ್ಯದ ಬಳಿಕ ತಂಡದ ಪ್ರಮುಖ ಆಲ್ರೌಂಡರ್ ಆರ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿದ್ದು, ಈ ಆಘಾತದ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸರಣಿಯ 4ನೇ ಹಾಗೂ Boxing Day Test ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೆಎಲ್ ರಾಹುಲ್ ಕೈಗೆ ಪೆಟ್ಟು ಮಾಡಿಕೊಂಡಿದ್ದು, ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಸರಣಿಯುದ್ದಕ್ಕೂ ಕಾಂಗರೂ ಬೌಲರ್ಗಳನ್ನು ಕಾಡಿದ್ದ ಕೆಎಲ್ ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ರಾಹುಲ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಗಾಯಗೊಂಡ ಬೆರಳಿಗೆ ತಂಡದ ಫಿಸಿಯೊ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ.
ಇನ್ನು ರಾಹುಲ್ ಗಾಯದ ಕುರಿತು ತಂಡದ ಅಧಿಕಾರಿಗಳು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಭಾರತ ತಂಡದ ವೈದ್ಯಕೀಯ ತಂಡ ರಾಹುಲ್ ಗಾಯದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಗಾಯಗ ಗಂಭೀರತೆ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಇಡೀ ಸರಣಿಯಲ್ಲಿ ಟೀಂ ಇಂಡಿಯಾ ಪರ ಕೊಂಚ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ರಾಹುಲ್ ಕೂಡ ಒಬ್ಬರು. ಹೀಗಾಗಿ ರಾಹುಲ್ ಬೇಗ ಚೇತರಿಸಿಕೊಂಡು ನಾಲ್ಕನೇ ಪಂದ್ಯಕ್ಕೆ ಲಭ್ಯರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಅಂದಹಾಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
Advertisement