
ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತದ ನಿತೀಶ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ದಾಖಲೆ ನಿರ್ಮಿಸಿದ್ದು, ಮಾಜಿ ನಾಯಕ ಅನಿಲ್ ಕುಂಭ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿ ನಿರ್ಮಿಸಿದ್ದ ದಾಖಲೆ ಮುರಿದ್ದಾರೆ.
ಹೌದು... 4ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಿಢೀರ್ ಕುಸಿತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಆಸರೆಯಾದರು. ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ಲೈಯಾನ್ ಬೌಲಿಂಗ್ ನಲ್ಲಿ ಔಟಾದರು.
ಕುಂಬ್ಳೆ-ಭಜ್ಜಿ ದಾಖಲೆ ಪತನ
ಈ ಜೋಡಿ ಒಟ್ಟಾರೆ 8ನೇ ವಿಕೆಟ್ ಗೆ ಬರೊಬ್ಬರಿ 127ರನ್ ಗಳ ಜೊತೆಯಾಟವಾಡಿತು. ಇದು ಅಪರೂಪದ ದಾಖಲೆಯಾಗಿದ್ದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ 8ನೇ ವಿಕೆಟ್ ನಲ್ಲಿ ಬಂದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಅಂತೆಯೇ ಈ ಜೋಡಿ ಈ ಹಿಂದೆ 2008ರಲ್ಲಿ ಅಡಿಲೇಡ್ ನಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಗಳಿಸಿದ್ದ 107 ರನ್ ಗಳ 8ನೇ ವಿಕೆಟ್ ಜೊತೆಯಾಟದ ದಾಖಲೆಯನ್ನೂ ಹಿಂದಿಕ್ಕಿದೆ.
2 ರನ್ ಅಂತರದಲ್ಲಿ ಮತ್ತೊಂದು ದಾಖಲೆ ಮಿಸ್
ಇನ್ನು ಈ ಜೋಡಿ ಇಂದು ಕೇವಲ 2ರನ್ ಗಳಿಸಿದ್ದರೆ 2008ರಲ್ಲಿ ಸಿಡ್ನಿಯಲ್ಲಿ ಸಚಿನ್ ಮತ್ತು ಹರ್ಭಜನ್ ಸಿಂಗ್ ಗಳಿಸಿದ್ದ 129ರನ್ ಗಳ ದಾಖಲೆಯನ್ನೂ ಮುರಿಯಬಹುದಿತ್ತು. ಆದರೆ ಕೇವಲ 2 ರನ್ ಗಳ ಅಂತರದಲ್ಲಿ ಈ ದಾಖಲೆ ಮಿಸ್ ಮಾಡಿಕೊಂಡಿದೆ.
Highest partnership for 8th wicket or lower for India in Australia
129 S Tendulkar - Harbhajan Sydney 2008
127 N Reddy - W Sundar Melbourne 2024
107 A Kumble - Harbhajan Adelaide 2008
Advertisement