BGT 2025: 3ನೇ ಅಂಪೈರ್ ಎಡವಟ್ಟು? ವಿವಾದಾತ್ಮಕ ತೀರ್ಪಿಗೆ Yashasvi Jaiswal ಬಲಿ?

2ನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ತಂಡದ ಘಟಾನುಘಟಿ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಿಂದಲೂ ಅವರಿಗೆ ನೆರವು ಸಿಗಲಿಲ್ಲ.
Yashasvi Jaiswal
ಜೈಸ್ವಾಲ್ ವಿವಾದಾತ್ಮಕ ಔಟ್
Updated on

ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲೂ ಭಾರತ ತಂಡ ಕಳಪೆ ಬ್ಯಾಟಿಂಗ್​ಗೆ ಬೆಲೆ ತೆತ್ತಿದೆ. ಆಸ್ಟ್ರೇಲಿಯಾ ವಿರುದ್ಧ 184 ರನ್​ಗಳ ಹೀನಾಯ ಸೋಲು ಕಂಡ ಭಾರತ ಸರಣಿಯಲ್ಲಿ 2-1 ಹಿನ್ನಡೆ ಅನುಭವಿಸಿದೆ. ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸುವಲ್ಲಿಯೂ ವಿಫಲವಾದ ರೋಹಿತ್ ಪಡೆ ಈಗ ಸರಣಿಯಲ್ಲಿ 2-1 ಅಂತರದಲ್ಲಿ ಹಿನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 340 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ರೋಹಿತ್​ ಶರ್ಮಾ (9), ವಿರಾಟ್ ಕೊಹ್ಲಿ (5), ಕೆಎಲ್ ರಾಹುಲ್ (0) ಅವರನ್ನು ಬೇಗನೇ ಕಳೆದುಕೊಂಡಿತು. ಕೇವಲ 33 ರನ್ ಗಳಿಸುವಷ್ಟರಲ್ಲಿ ಟಾಪ್​-3 ಬ್ಯಾಟರ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Yashasvi Jaiswal
BGT 2025, 4th test: ಭಾರತಕ್ಕೆ 184 ರನ್ ಸೋಲು, ಆಸಿಸ್ 2-1 ಸರಣಿ ಮುನ್ನಡೆ

ವ್ಯರ್ಥವಾದ ಜೈಸ್ವಾಲ್ ಏಕಾಂಗಿ ಹೋರಾಟ

ಇನ್ನು ಭಾರತದ 2ನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸಿದರು. ತಂಡದ ಘಟಾನುಘಟಿ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಿಂದಲೂ ಅವರಿಗೆ ನೆರವು ಸಿಗಲಿಲ್ಲ. ರಿಷಬ್ ಪಂತ್ ಮತ್ತೆ ಗ್ಲಾಮರ್ ಶಾಟ್ ಗೆ ಬಲಿಯಾದರು. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರು ಮತ್ತೊಂದು ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಜೈಸ್ವಾಲ್ 208 ಎಸೆತಗಳಲ್ಲಿ 8 ಬೌಂಡರಿ ಸಹಿತ 84 ರನ್ ಗಳಿಸಿ ತಂಡಕ್ಕೆ ಆಸೆರೆಯಾಗಿದ್ದರು. ಎರಡನೇ ಇನ್ನಿಂಗ್ಸ್​​ನಲ್ಲೂ ಅರ್ಧಶತಕ ಸಿಡಿಸಿ ಗೆಲುವು ಅಥವಾ ಡ್ರಾ ಮಾಡುವ ಭರವಸೆ ಮೂಡಿಸಿದ್ದರು.

ವಿವಾದಾತ್ಮಕ ತೀರ್ಪಿಗೆ ಬಲಿ

ಸತತ ವಿಕೆಟ್ ಪತನವಾಗುತ್ತಿದ್ದರೂ ಮತ್ತೊಂದು ಎಂಡ್​ನಲ್ಲಿ ಬಂಡೆಗಲ್ಲಿನಂತೆ ನಿಂತು ಹೋರಾಡಿದ ಜೈಸ್ವಾಲ್ ಸತತ 2ನೇ ಅರ್ಧಶತಕ ಸಿಡಿಸಿದರು. ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಲು ದಿಟ್ಟ ಹೋರಾಟ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ ಪ್ಯಾಟ್ ಕಮಿನ್ಸ್ ಓವರ್ ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಪ್ಯಾಟ್ ಕಮಿನ್ಸ್​ ಎಸೆದ 71ನೇ ಓವರ್​ನ 5ನೇ ಎಸೆತದಲ್ಲಿ ಪುಲ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ತಪ್ಪಿಸಿ ವಿಕೆಟ್ ಕೀಪರ್​ ಕೈ ಸೇರಿತು. ಈ ವೇಳೆ ಆಸೀಸ್ ಆಟಗಾರರು, ಅಂಪೈರ್​ಗೆ ಬಲವಾದ ಮನವಿ ಸಲ್ಲಿಸಿದರು. ಆದರೆ ಮೈದಾನದ ಅಂಪೈರ್​​ ನಾಟ್​ಔಟ್ ಎಂದು ತೀರ್ಪು ಕೊಟ್ಟರು. ಹೀಗಾಗಿ, ತಂಡದ ಆಟಗಾರರೊಂದಿಗೆ ಚರ್ಚಿಸಿದ ಕಮಿನ್ಸ್, ಆನ್​ಫೀಲ್ಡ್​ ಅಂಪೈರ್​ ತೀರ್ಪಿನ ವಿರುದ್ಧ ಮೂರನೇ ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದರು. ಆಗ 3ನೇ ಅಂಪೈರ್ ಔಟ್ ತೀರ್ಪು ನೀಡಿದರು.

ಗ್ಲೌಸ್​​ ಅಥವಾ ಬ್ಯಾಟ್​ಗೆ ಚೆಂಡು ತಾಗಿಲ್ಲ..

ಮೂರನೇ ಅಂಪೈರ್ ಆಗಿದ್ದ ಬಾಂಗ್ಲಾದೇಶದ ಶರ್ಫುದ್ದೌಲಾ, ಅಲ್ಟ್ರಾ ಎಡ್ಜ್​ ಪರಿಶೀಲನೆ ನಡೆಸಿದರು. ಚೆಂಡು ಬ್ಯಾಟ್ ಪಕ್ಕದಲ್ಲೇ ಹಾದು ಹೋಗುತ್ತದಾದರೂ ಎಲ್ಲೂ ತಾಗದೇ ಇರುವುದು ಕಂಡು ಬಂತು. ಬ್ಯಾಟ್ ಅಥವಾ ಗ್ಲೌಸ್​ಗೆ ಚೆಂಡು ಟಚ್​ ಆಗಲಿಲ್ಲ ಎನ್ನುವುದು ಅಲ್ಟ್ರಾ ಎಡ್ಜ್​​ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಚೆಂಡು ಹಾದು ಹೋದಾಗ ಸ್ನೀಕೊ ಮೀಟರ್​ನಲ್ಲಿ ತಾಗಿರುವ ಸ್ಟ್ರೈಕ್​ ಕಾಣಲೇ ಇಲ್ಲ. ಇದನ್ನು ಹಲವು ಬಾರಿ ಪರಿಶೀಲನೆ ನಡೆಸಿದರೂ ಒಂದೇ ರೀತಿ ಕಾಣುತ್ತಿತ್ತು. ಅದಾಗಿಯೂ ಚೆಂಡು ಬ್ಯಾಟ್​ಗೆ ಸವರಿ ದಿಕ್ಕು ಬದಲಿಸಿರಬಹುದು ಎಂದು ಅಂದಾಜಿಸಿ ಮೂರನೇ ಅಂಪೈರ್​ ಔಟ್ ಎಂದು ತೀರ್ಪು ನೀಡಿದರು. ಮೈದಾನದಲ್ಲೇ ಇದ್ದ ಜೈಸ್ವಾಲ್ ಅಚ್ಚರಿ ಜೊತೆ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ಭಾರತೀಯ ಆಟಗಾರರು ಅಚ್ಚರಿ ವ್ಯಕ್ತಪಡಿಸಿದರು. ಇದರೊಂದಿಗೆ ಅವರ ಏಕಾಂಗಿ ಹೋರಾಟ ಅಲ್ಲಿಗೆ ಅಂತ್ಯಗೊಂಡಿತು.

ವಿವಾದಾತ್ಮಕ ತೀರ್ಪಿಗೆ ವ್ಯಾಪಕ ಆಕ್ರೋಶ

3ನೇ ಅಂಪೈರ್ ತೀರ್ಪು ದೊಡ್ಡ ಪರದೆ ಮೇಲೆ ಪ್ರದರ್ಶನವಾಗುತ್ತಲೇ ಭಾರತ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಂಪೈರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಇದು ಒಪ್ಪುವಂತಹ ತೀರ್ಪು ಅಲ್ಲ. ಸ್ಪಷ್ಟವಾಗಿ ಚೆಂಡು ತಾಗದೇ ಇರುವುದು ಕಂಡರೂ ಔಟ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಗಂಗೂಲಿ ಮಾತ್ರವಲ್ಲ, ಬಹುತೇಕ ಮಾಜಿ ಕ್ರಿಕೆಟಿಗರು ಮೂರನೇ ಅಂಪೈರ್ ನೀಡಿರುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೆಂಡು ದಿಕ್ಕು ಬದಲಿಸಿದ ಮಾತ್ರ ಔಟ್ ಎಂದು ತೀರ್ಪು ನೀಡಲು ಹೇಗೆ ಸಾಧ್ಯ? ಚೆಂಡು ಸ್ವಿಂಗ್ ಆಗಿರಬಹುದು ಎಂದು ಅನೇಕರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com