ಟೀಂ ಇಂಡಿಯಾಗೆ ಸೋಲಿನ ಆಘಾತ: ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ?

ಮೂರು ಟೆಸ್ಟ್‌ಗಳಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನು ರೋಹಿತ್ ಶರ್ಮಾ ಗಳಿಸಿದ್ದಾರೆ. ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರು 30 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Updated on

ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಂತರ ನಿವೃತ್ತಿ ಘೋಷಿಸಲು ಸಿದ್ದರಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಿಸಿಸಿಐ ಉನ್ನತ ಅಧಿಕಾರಿಗಳು ಮತ್ತು ಆಯ್ಕೆದಾರರು ಈಗಾಗಲೇ ಈ ನಿರ್ಧಾರದ ಬಗ್ಗೆ ಮಾತನಾಡಿದ್ದು, ರೋಹಿತ್ ತಮ್ಮ ಮನಸ್ಸನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ. ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ನಂತರ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿ ಹೇಳಿದೆ.

ಆದಾಗ್ಯೂ, ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆದರೆ, ರೋಹಿತ್ ತಂಡದಲ್ಲಿ ಉಳಿಯಲು ಅವಕಾಶ ನೀಡುವಂತೆ ಆಯ್ಕೆಗಾರರನ್ನು ಮನವೊಲಿಸಲು ಪ್ರಯತ್ನಿಸಬಹುದು ಎನ್ನಲಾಗಿದೆ.

ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ, ರೋಹಿತ್ ಶರ್ಮಾ ತೀವ್ರ ಬೇಸರವನ್ನು ಹೊರಹಾಕಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, 'ನಮಗೆ ತುಂಬಾನೇ ಬೇಸರ ಆಗುತ್ತಿದೆ. ನಮ್ಮ ಉದ್ದೇಶ ಸೋಲುವುದಾಗಿರಲಿಲ್ಲ. ಬ್ಯಾಟಿಂಗ್‌ ವೈಫಲ್ಯ ಮಾನಸಿಕವಾಗಿ ದೊಡ್ಡ ಸವಾಲು, ಇದು ದೊಡ್ಡ ನಿರಾಸೆ ತಂದಿದೆ. ನಾವು ತಂಡವಾಗಿ ಹಲವು ವಿಚಾರಗಳನ್ನು ನೋಡಬೇಕಿದೆ. ವೈಯಕ್ತಿಕವಾಗಿ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ. ಈ ಪಂದ್ಯ ಡ್ರಾ ಆಗಿದ್ದರೆ ಇನ್ನೂ ಚನ್ನಾಗಿರುತ್ತದೆ ಎಂದು ಹೇಳಿದರು.

ಮೂರು ಟೆಸ್ಟ್‌ಗಳಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನು ರೋಹಿತ್ ಶರ್ಮಾ ಗಳಿಸಿದ್ದಾರೆ. ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರು 30 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾರ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಬೇಸತ್ತಿದ್ದಾರೆ. ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿ ಎನ್ನುವ ಕೂಗುಗಳು ಕೇಳಿಬರುತ್ತಿವೆ.

ನಾನಿಂದು ನಿಂತಿರುವ ಸ್ಥಾನದಲ್ಲಿಯೇ ನಿಂತಿದ್ದೇನೆ. ಈ ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಯೋಚಿಸಲು ಏನೂ ಇಲ್ಲ. ನಿಸ್ಸಂಶಯವಾಗಿ, ಕೆಲವು ಫಲಿತಾಂಶಗಳು ನಾವಂದುಕೊಂಡ ರೀತಿಯಲ್ಲಿ ಬಂದಿಲ್ಲ. ನಾಯಕನಾಗಿ ಯೋಚಿಸುವುದಾದರೆ, ಹೌದು ಇದು ನಿರಾಶಾದಾಯಕವಾಗಿದೆ. ಸರಣಿಯ ಅಂತಿಮ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ.

ನಾನು ಮಾಡಲು ಪ್ರಯತ್ನಿಸುತ್ತಿರುವ ಬಹಳಷ್ಟು ಕೆಲಸಗಳು ನಾನು ಅಂದುಕೊಂಡ ರೀತಿಯಲ್ಲಿ ಆಗುತ್ತಿಲ್ಲ. ಬಯಸಿದ ಸ್ಥಳದಲ್ಲಿ ಬೀಳುತ್ತಿಲ್ಲ, ಆದರೆ ಮಾನಸಿಕವಾಗಿ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ನೀವು ಇಲ್ಲಿಗೆ ಬಂದು ಪ್ರಯತ್ನಿಸಿದ ಮೇಲೂ ನೀವಂದುಕೊಂಡ ರೀತಿಯಲ್ಲಿ ಫಲಿತಾಂಶ ಬಾರದಿದ್ದರೆ, ಅದು ದೊಡ್ಡ ನಿರಾಸೆಯಾಗಿರುತ್ತದೆ ಎಂದು ರೋಹಿತ್ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com