
ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗುಜರಾತ್ ಜೈಂಟ್ಸ್ ವಿರುದ್ಧದ ಡಬ್ಲ್ಯುಪಿಎಲ್ 2024ರ ಪಂದ್ಯದ ವೇಳೆ ಅಭಿಮಾನಿಯೊಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರ ಮುಂದೆ ಮದುವೆ ಪ್ರಸ್ತಾಪವನ್ನಿಟ್ಟಿರುವ ಕುತೂಹಲಕಾರಿ ಘಟನೆ ನಡೆಯಿತು.
ಆರ್‌ಸಿಬಿ ಇನಿಂಗ್ಸ್‌ನ ಏಳನೇ ಓವರ್‌ನ ಸಮಯದಲ್ಲಿ, ಉತ್ತರ ಕರ್ನಾಟಕದ ಅಭಿಮಾನಿಯೊಬ್ಬರು 'ಶ್ರೇಯಾಂಕಾ ಪಾಟೀಲ್ ಅವರೇ ನೀವು ನನ್ನನ್ನು ಮದುವೆಯಾಗುತ್ತೀರಾ' ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸಿದ್ದಾರೆ. ಇದನ್ನು ಕಂಡ ಆರ್‌ಸಿಬಿ ಆಟಗಾರರು ನಗುತ್ತಿರುವುದು ಕಂಡುಬಂದಿದೆ.
ಈಮಧ್ಯೆ, ಸ್ಮೃತಿ ಮಂಧಾನ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುಜರಾತ್ ಜೈಂಟ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಸುಲಭ ಜಯ ಸಾಧಿಸಿತು.
ಜಿಜಿ ನೀಡಿದ್ದ 108 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರವಾಗಿ ಆರಂಭಿಕರಾಗಿ ಮಂಧಾನ ಮತ್ತು ಸೋಫಿ ಡಿವೈನ್ ಕ್ರೀಸ್‌ಗೆ ಬಂದರು. ನಾಲ್ಕನೇ ಓವರ್‌ನಲ್ಲಿ ಆಶ್ಲೀಗ್ ಗಾರ್ಡ್ನರ್ ಅವರು ಡಿವೈನ್ ಅವರನ್ನು ಔಟ್ ಮಾಡುವವರೆಗೂ ಮಂಧಾನ-ಡಿವೈನ್ ಜೋಡಿ 32 ರನ್‌ಗಳ ಜೊತೆಯಾಟವಾಡಿದರು. ಡಿವೈನ್ ಕೇವಲ ಆರು ರನ್ ಗಳಿಸಿ ನಿರ್ಗಮಿಸಿದರು.
ಬಳಿಕ ಬಂದ ಮಂದಾನ ಅವರು ತನುಜಾ ಕನ್ವರ್ ಅವರಿಗೆ ವಿಕೆಟ್ ಒಪ್ಪಿಸಿದರು. 27 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸುವ ಮೂಲಕ 43 ರನ್ ಗಳಿಸಿ ಆರ್‌ಸಿಬಿಗೆ ನೆರವಾದರು.
ನಂತರ ಬಂದ ಸಬ್ಬಿನೇನಿ ಮೇಘನಾ ಮತ್ತು ಎಲ್ಲಿಸ್ ಪೆರ್ರಿ ಅವರ ಆಟದ ವೈಖರಿ ಅಭಿಮಾನಿಗಳ ಗಮನಸೆಳೆಯಿತು. ಮೇಘನಾ ಮತ್ತು ಪೆರ್ರಿ ಔಟಾಗದೆ 108 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ಮೇಘನಾ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು. ಈ ಮಧ್ಯೆ ಪೆರ್ರಿ ನಾಲ್ಕು ಬೌಂಡರಿಗಳ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈಮೂಲಕ ಆರ್‌ಸಿಬಿ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.
Advertisement