
ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ, ಭಾರತವು ಮೂರನೇ ಮತ್ತು ಅಂತಿಮ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. ಇನ್ನು 55 ಎಸೆತಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರ ಸಮಬಲದೊಂದಿಗೆ ಅಂತ್ಯಗೊಂಡಿದೆ.
ವೇಗದ ಬೌಲರ್ ವಸ್ತ್ರಾಕರ್ (13 ರನ್‌ಗಳಿಗೆ 4 ವಿಕೆಟ್) ವೃತ್ತಿಜೀವನದ ಅತ್ಯುತ್ತಮ 4 ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ರಾಧಾ (6 ರನ್‌ಗಳಿಗೆ 3 ವಿಕೆಟ್) 3 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ 17.1 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲೌಟ್ ಆಯಿತು. ಭಾರತ 10.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಸ್ಮೃತಿ ಮಂಧಾನ 40 ಎಸೆತಗಳಲ್ಲಿ 54 ರನ್ ಮತ್ತು ಶೆಫಾಲಿ ವರ್ಮಾ 25 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಿಕಾ ಮೊದಲ ಪಂದ್ಯವನ್ನು 12 ರನ್‌ಗಳಿಂದ ಗೆದ್ದುಕೊಂಡರೆ, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದಕ್ಕೂ ಮುನ್ನ ಭಾರತ ಏಕದಿನ ಸರಣಿಯಲ್ಲಿ 3-0 ಅಂತರದ ಗೆಲುವು ದಾಖಲಿಸಿದ್ದಲ್ಲದೆ, ಏಕೈಕ ಟೆಸ್ಟ್ ಪಂದ್ಯವನ್ನೂ ಗೆದ್ದುಕೊಂಡಿತ್ತು.
Advertisement