
ಮುಂಬೈ: ಭಾರತ ಕ್ರಿಕೆಟ್ ನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಮ್ಮ ಸಹ ಆಟಗಾರ ಅಂಶುಮಾನ್ ಗಾಯಕ್ವಾಡ್ ಅವರ ಸಂಕಷ್ಟಕ್ಕೆ ಮರುಗಿದ್ದಾರೆ.
ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಬ್ಲಡ್ ಕ್ಯಾನ್ಸರ್ (blood cancer) ನಿಂದ ಬಳಲುತ್ತಿದ್ದು, ಗೆಳೆಯನ ಸಂಕಷ್ಟಕ್ಕೆ ನೆರವಾಗಲು ಬಿಸಿಸಿಐ ಗೂ ಮನವಿ ಮಾಡಿದ್ದಾರೆ.
71 ವರ್ಷದ ಗಾಯಕ್ವಾಡ್ ಕಳೆದ ಒಂದು ವರ್ಷದಿಂದ ಲಂಡಾನ್ ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ಇನ್ನಿತರ ಸಹ ಆಟಗಾರರಾದ ಮೊಹಿಂದರ್ ಅಮರ್ ನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್‌ಸರ್ಕರ್, ಮದನ್ ಲಾಲ್, ರವಿ ಶಾಸ್ತ್ರಿ, ಕೀರ್ತಿ ಆಜಾದ್ ಅವರು ಗಾಯಕ್ವಾಡ್ ಅವರ ಚಿಕಿತ್ಸೆಗೆ ಅಗತ್ಯವಿರುವ ಆರ್ಥಿಕ ಸಹಾಯ ಒದಗಿಸುವುದಕ್ಕಾಗಿ ಸಾಕಷ್ಟು ನೆರವು ನೀಡುತ್ತಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಈ ವಿಷಯವಾಗಿ ತಾವು ಬರೆದಿರುವ ಪತ್ರಕ್ಕೆ ಬಿಸಿಸಿಐ ಸ್ಪಂದಿಸುತ್ತದೆ ಎಂದೂ ಕಪಿಲ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಿಸದೇ ಇದ್ದಲ್ಲಿ ತಾವು ತಮ್ಮ ಪಿಂಚಣಿಯ ಹಣವನ್ನು ನೀಡುವುದಾಗಿ ಘೋಷಿಸಿದ್ದಾರೆ.
"ದುರದೃಷ್ಟವಶಾತ್, ನಮ್ಮಲ್ಲಿ ವ್ಯವಸ್ಥೆ ಇಲ್ಲ, ಈ ತಲೆಮಾರಿನ ಆಟಗಾರರು ಉತ್ತಮ ಹಣ ಗಳಿಸುವುದನ್ನು ನೋಡುವುದು ಸಂತೋಷವಾಗಿದೆ. ಸಹಾಯಕ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಿರುವುದು ಸಂತೋಷವಾಗಿದೆ. ನಮ್ಮ ಕಾಲದಲ್ಲಿ ಮಂಡಳಿಯಲ್ಲಿ ಹಣವಿರಲಿಲ್ಲ. ಇಂದು, ಕ್ರಿಕೆಟ್ ಮಂಡಳಿ ಉತ್ತಮ ಸ್ಥಿತಿಯಲ್ಲಿದೆ. ಹಿಂದಿನಿಂದಲೂ ಹಿರಿಯ ಆಟಗಾರರನ್ನು ನೋಡಿಕೊಳ್ಳಬೇಕು. ಟ್ರಸ್ಟ್ ರಚನೆಯಾದರೆ, ಇಂತಹ ಉದ್ದೇಶಗಳಿಗಾಗಿ ಹಣವನ್ನು ಅಲ್ಲಿ ಹಾಕಬಹುದು. ಆದರೆ ನಮ್ಮಲ್ಲಿ ವ್ಯವಸ್ಥೆ ಇಲ್ಲ. ಟ್ರಸ್ಟ್ ಇರಬೇಕು. ಬಿಸಿಸಿಐ ಈ ಕೆಲಸವನ್ನು ಮಾಡಬಹುದಾಗಿದೆ.
ಅವರು ಮಾಜಿ ಮತ್ತು ಪ್ರಸ್ತುತ ಆಟಗಾರರನ್ನು ನೋಡಿಕೊಳ್ಳುತ್ತಾರೆ. ಕ್ರಿಕೆಟ್ ಕುಟುಂಬ ನಮಗೆ ಅವಕಾಶ ನೀಡಿದರೆ ನಮ್ಮ ಪಿಂಚಣಿ ಮೊತ್ತವನ್ನು ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಲು ನಾವು ಸಿದ್ಧರಿದ್ದೇವೆ, ”ಎಂದು ಕಪಿಲ್ ದೇವ್ ಹೇಳಿದ್ದಾರೆ
ಗಾಯಕ್ವಾಡ್ ಅವರ ಕ್ರಿಕೆಟ್ ಪರಂಪರೆ ಗಮನಾರ್ಹವಾಗಿದೆ. ಅವರು 1975 ಮತ್ತು 1987 ರ ನಡುವೆ ಭಾರತದ ಪರ 40 ಟೆಸ್ಟ್ ಮತ್ತು 15 ODIಗಳನ್ನು ಆಡಿದ್ದಾರೆ ಮತ್ತು ನಂತರ ಎರಡು ಪ್ರತ್ಯೇಕ ಅವಧಿಗಳಲ್ಲಿ ಭಾರತದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
Advertisement