
ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ವಿಕಲಾಂಗರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಸುರೇಶ್ ರೈನಾ, ಯುವರಾಜ್ ಸಿಂಗ್ ಮತ್ತು ಗುರುಕೀರತ್ ಮಾನ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ನ್ಯಾಷನಲ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಎಂಪ್ಲಾಯ್ಮೆಂಟ್ ಫಾರ್ ಡಿಸೇಬಲ್ಡ್ ಪೀಪಲ್(ಎನ್‌ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ದೂರು ನೀಡಿದ್ದಾರೆ.
ಕ್ರಿಕೆಟಿಗರಲ್ಲದೆ, ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ದೇವನಾಥನ್ ವಿರುದ್ಧವೂ ದೂರು ದಾಖಲಾಗಿದೆ. ದೂರಿನಲ್ಲಿ, ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್, ಅಂತಹ ವಿಷಯವನ್ನು ಪೋಸ್ಟ್ ಮಾಡಲು ಅವಕಾಶ ನೀಡುವ ಮೂಲಕ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಜಿಲ್ಲೆಯ ಸೈಬರ್ ಸೆಲ್‌ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ರ ಫೈನಲ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದ ಬಳಿಕ, ಭಾರತ ಚಾಂಪಿಯನ್ಸ್ ತಂಡದ ಆಟಗಾರರಾದ ಹರ್ಭಜನ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಕುಂಟುತ್ತಾ ಮತ್ತು ತಮಾಷೆಯಿಂದ ನಡೆದುಕೊಂಡು ಬಂದಿದ್ದಾರೆ. ಇದು ವಿಕಲಾಂಗರು ನಡೆಯುವುದನ್ನು ಅಣಕಿಸುವಂತಿದೆ.
ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಮಾನಸಿ ಜೋಶಿ ಅವರು ಮಾಜಿ ಕ್ರಿಕೆಟಿಗರ ವರ್ತನೆಯನ್ನು ಟೀಕಿಸಿದ್ದಾರೆ. ಅವರ ಈ ನಡೆ ವಿಶೇಷ ಚೇತನ ವ್ಯಕ್ತಿಗಳಿಗೆ ಅಗೌರವ ಎಂದು ಹೇಳಿದ್ದಾರೆ.
Advertisement