
ಪಳ್ಳೆಕೆಲೆ: 3ನೇ ಟಿ20 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ವಿರೋಚಿತ ಜಯ ದಾಖಲಿಸಿದ ಬೆನ್ನಲ್ಲೇ ಈ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಮಾತ್ರವಲ್ಲದೇ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಎಲೈಟ್ ಗ್ರೂಪ್ ಸೇರಿದ್ದಾರೆ.
ಹೌದು.. ಇಂದು ಪಳ್ಳೆಕೆಲೆ ಕ್ರೀಡಾಂಗಣದಲ್ಲಿ ನಡೆದ 3ನೇ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ್ದು ಆ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಭಾರತ ಬಿ ಟೀಂ ಎಂದೇ ಕರೆಯಲಾಗುತ್ತಿದ್ದ ಭಾರತ ಯುವ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಸರಣಿ ಜಯ ಸಾಧಿಸಿದೆ.
ಅಂತೆಯೇ ಈ ಸರಣಿಯಲ್ಲಿ ಹಲವು ಕ್ರಿಕೆಟ್ ದಾಖಲೆಗಳು ನಿರ್ಮಾಣವಾಗಿದ್ದು, ಶ್ರೀಲಂಕಾ ಹೀನಾಯ ದಾಖಲೆ ಬರೆದಿದೆ.
ಸಿಂಹಳೀಯರ ವಿರುದ್ಧ ಭಾರತ ಪಾರಮ್ಯ
ಇನ್ನು ಈ ಪಂದ್ಯದ ಗೆಲುವಿನ ಮೂಲಕ ಭಾರತ ಶ್ರೀಲಂಕಾ ವಿರುದ್ಧ ಟಿ20ಯಲ್ಲಿ ಅತೀ ಹೆಚ್ಚು ಜಯ ಗಳಿಸಿದ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಅಂತೆಯೇ ತಂಡವೊಂದರ ವಿರುದ್ಧ ಅತೀ ಹೆಚ್ಚು ಜಯ ದಾಖಲಿಸಿದ 2ನೇ ತಂಡ ಎಂಬ ಕೀರ್ತಿಗೂ ಭಾರತ ಭಾಜನವಾಗಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದ್ದು
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಒಟ್ಟು 23 ಪಂದ್ಯಗಳಲ್ಲಿ ಜಯ ಗಳಿಸಿದೆ. ನಂತರದ ಸ್ಥಾನದಲ್ಲಿ ಭಾರತ ಇದ್ದು ಭಾರತ ಶ್ರೀಲಂಕಾ ವಿರುದ್ಧ 22 ಪಂದ್ಯಗಳಲ್ಲಿ ಜಯಭೇರಿ ಭಾರಿಸಿದೆ. ನಂತರದ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು, ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ 21 ಪಂದ್ಯ ಜಯಿಸಿದೆ.
Most wins against a team in T20Is (including super overs)
23 - PAK vs NZ (44 mats)
22 - IND vs SL (32)*
21 - ENG vs PAK (31)
20 - IND vs AUS (32)
ಶ್ರೀಲಂಕಾ ಹೀನಾಯ ದಾಖಲೆ
ಇನ್ನು ಇಂದಿನ ಪಂದ್ಯದ ಸೋಲು ಶ್ರೀಲಂಕಾ ತಂಡವನ್ನು ಹೀನಾಯ ದಾಖಲೆ ಪಟ್ಟಿಗೆ ಸೇರಿಸಿದ್ದು ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಶ್ರೀಲಂಕಾದ 105ನೇ ಸೋಲಾಗಿದೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ಹೆಚ್ಚು ಸೋಲು ಕಂಡ ತಂಡ ಎಂಬ ಕುಖ್ಯಾತಿಗೂ ಶ್ರೀಲಂಕಾ ಭಾಜನವಾಗಿದೆ. ಈ ಹಿಂದೆ ಈ ಕುಖ್ಯಾತಿ ಬಾಂಗ್ಲಾದೇಶದ ಹೆಸರಲ್ಲಿತ್ತು. ಬಾಂಗ್ಲಾದೇಶ 104 ಸೋಲುಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಇದೀಗ ಶ್ರೀಲಂಕಾ ಈ ಅಗ್ರಸ್ಥಾನಕ್ಕೇರಿ ಬಾಂಗ್ಲಾದೇಶ 2ನೇ ಸ್ಥಾನಕ್ಕೆ ಕುಸಿದಿದೆ. 3ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ (101), 4ನೇ ಸ್ಥಾನದಲ್ಲಿ ಜಿಂಬಾಬ್ವೆ (99) ತಂಡಗಳಿವೆ.
Most defeats in T20Is (including super overs)
105 - Sri Lanka*
104 - Bangladesh
101 - West Indies
99 - Zimbabwe
ಟಿ20 ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಸ್ಪಿನ್ನರ್ ಗಳು
ಇನ್ನು ಇಂದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು ಅತೀ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಶ್ರೀಲಂಕಾದ 8 ವಿಕೆಟ್ ಗಳು ಭಾರತದ ಸ್ಪಿನ್ನರ್ ಗಳೇ ತೆಗೆದುಕೊಂಡಿದ್ದು ಆ ಮೂಲಕ ಸ್ಪಿನ್ನರ್ ಗಳು ಅತೀಹೆಚ್ಚು ವಿಕೆಟ್ ಪಡೆದ 3ನೇ ಪಂದ್ಯ ಇದಾಗಿದೆ. ಈ ಹಿಂದೆ 2022ರಲ್ಲಿ ಲೌಡರ್ ಹಿಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು 10 ವಿಕೆಟ್ ಪಡೆದಿದ್ದರು. ಇದು ಅಗ್ರಸ್ಥಾನದಲ್ಲಿದೆ.
Most wickets by Indian spinners in a T20I
10 vs WI, Lauderhill, 2022
8 vs BAN, Hangzhou, 2023
8 vs SL, Pallekele, 2024*
ಅತೀ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ; ಎಲೈಟ್ ಗ್ರೂಪ್ ಸೇರಿದ SKY
ಅಂತೆಯೇ ಶ್ರೀಲಂಕಾ ವಿರುದ್ಧ ಸರಣಿಗೆ ನಾಯಕರಾಗಿ ಆಯ್ಕೆಯಾದ ಸೂರ್ಯ ಕುಮಾರ್ ಯಾದವ್ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಇದೇ ಸರಣಿಯಲ್ಲಿ ಮತ್ತೊಂದು ದಾಖಲೆಗೂ ಪಾತ್ರರಾಗಿದ್ದಾರೆ. ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸೂರ್ಯ ಕುಮಾರ್ ಯಾದವ್ ಟಿ20ಯಲ್ಲಿ ಜಂಟಿ 2ನೇ ಅತೀ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆಟಗಾ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಕೊಹ್ಲಿ 6 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಲಾ 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) ಮತ್ತು ಸೂರ್ಯ ಕುಮಾರ್ ಯಾದವ್ (ಭಾರತ) ಜಂಟಿ 2ನೇ ಸ್ಥಾನದಲ್ಲಿದ್ದಾರೆ.
Most POTS awards in T20Is
6 - Virat Kohli
5 - Shakib Al Hasan
5 - David Warner
5 - Suryakumar Yadav*
Advertisement