
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿ ಮುಗಿದು ಭಾರತೀಯ ಕ್ರಿಕೆಟ್ ತಂಡವು 2024ರ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ವೇಳೆಯಲ್ಲಿಯೂ ಹಾರ್ದಿಕ್ ಪಾಂಡ್ಯ-ರೋಹಿತ್ ಶರ್ಮಾ ಅವರ ನಡುವಿನ ವಿಚಾರಗಳು ಇನ್ನೂ ಮುನ್ನಲೆಯಲ್ಲಿವೆ. ಐಪಿಎಲ್‌ನಲ್ಲಿ ಏನಾಯಿತು ಎಂಬುದರ ಹೊರತಾಗಿಯೂ ಈ ಇಬ್ಬರು ಭಾರತ ತಂಡದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದು ಇದೀಗ ಎಲ್ಲರ ಮುಂದಿರುವ ನಿರೀಕ್ಷೆಯಾಗಿದ್ದು, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮತ್ತು ಆಸ್ಟ್ರೇಲಿಯಾದ ನಿವೃತ್ತ ಕ್ರಿಕೆಟಿಗ ಮ್ಯಾಥ್ಯೂ ಹೇಡನ್, ರೋಹಿತ್ ಮತ್ತು ಹಾರ್ದಿಕ್ ನಡುವೆ ಇದೀಗ ಐಪಿಎಲ್ ಬಗೆಗಿನ ಯಾವುದೇ ವಿಚಾರಗಳು ಚರ್ಚೆಗೆ ಬರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
'ಐಪಿಎಲ್ ಆವೃತ್ತಿಯಲ್ಲಿ ಏನಾಯಿತು ಎಂಬುದರ ಬಗ್ಗೆ ಒಮ್ಮೆಯೂ ಚರ್ಚೆ ನಡೆಯಬಾರದು. ಅದರ ಬಗ್ಗೆ ಮಾತನಾಡಬೇಡಿ. ಈಗ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಹಾರ್ದಿಕ್ ಪಾಂಡ್ಯ ಅಥವಾ ನಿರ್ದಿಷ್ಟ ಆಟಗಾರರಿಂದ ಏನನ್ನು ಬಯಸುತ್ತಾರೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು' ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಮ್ಯಾಥ್ಯೂ ಹೇಡನ್ ಕೂಡ ಇರ್ಫಾನ್ ಹೇಳಿಕೆಯನ್ನೇ ಹೇಳಿದ್ದು, ಐಪಿಎಲ್ ವೇಳೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನಾಯಿತು ಎಂಬುದನ್ನು ಮತ್ತೆ ಮತ್ತೆ ಮಾತನಾಡುವ ಅಗತ್ಯವಿಲ್ಲ. ಇದೀಗ ಭಾರತ ತಂಡ ಮತ್ತು ಟಿ20 ವಿಶ್ವಕಪ್‌ಗೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಮಾತನಾಡಬೇಕು ಎಂದಿದ್ದಾರೆ.
'ಯಾವುದೇ ಅನುಮಾನವಿಲ್ಲದೆ, ಟೀಂ ಇಂಡಿಯಾದ ನಾಯಕ ಯಾರೆಂದು ನಿಮಗೆ ತಿಳಿದಿದೆ. ಹೀಗಾಗಿ, ಬೇರೆ ಏನನ್ನೂ ಮಾತನಾಡಬೇಕಾಗಿಲ್ಲ. ನೀವು ಒಬ್ಬರನ್ನೊಬ್ಬರು ನೋಡುತ್ತೀರಿ, ಈಗ ಏನಾಗಬೇಕೆಂದು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನೀವು ಅದರಂತೆ ಕೆಲಸ ಮಾಡುತ್ತೀರಿ. ಇರ್ಫಾನ್ ಈಗ ಹೇಳಿದ್ದು ನನಗೆ ಸರಿ ಎನಿಸಿದೆ. ನೀವು ಅದರ ಬಗ್ಗೆ ಮಾತನಾಡಬೇಡಿ' ಎಂದು ಹೇಡನ್ ತಿಳಿಸಿದ್ದಾರೆ.
'ಆಸ್ಟ್ರೇಲಿಯಾವು ಪ್ರಸಿದ್ಧ ಸಂಸ್ಕೃತಿಯನ್ನು ಹೊಂದಿಲ್ಲ. ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ನಾವು ಅದನ್ನು ಹೊಂದಿದ್ದೇವೆ. ಆದರ್ಶಪ್ರಾಯವಾಗಿ ನಾನು ಆಸ್ಟ್ರೇಲಿಯನ್ ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿಯ ನಡುವೆ ಉತ್ತಮ ಸಮತೋಲನವನ್ನು ಬಯಸುತ್ತೇನೆ. ಕೆಲವೊಮ್ಮೆ ಅಂತಹ ಸಂಸ್ಕೃತಿಯನ್ನು ಹೊಂದಿರುವುದು ನಮಗೆ ಸಹಾಯ ಮಾಡುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಾವು ಆಸ್ಟ್ರೇಲಿಯನ್ನರಲ್ಲ, ನಾವು ಭಾರತೀಯರು. ನಮ್ಮ ಭಾವನೆಗಳು, ನೀತಿಗಳು ಮತ್ತು ಮನಸ್ಥಿತಿಗಳು ವಿಭಿನ್ನವಾಗಿವೆ' ಎಂದು ಪಠಾಣ್ ಹೇಳಿದರು.
ಐಪಿಎಲ್ 2024ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ತಾವೇ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದು ಹಾರ್ದಿಕ್ ಪಾಂಡ್ಯಾರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಮಾನಿಗಳು ಮತ್ತು ತಜ್ಞರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ತಂಡದಲ್ಲಿ ಎರಡು ಗುಂಪುಗಳಾಗಿದ್ದು, ಐಪಿಎಲ್‌ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂಬ ವರದಿಗಳು ಹೊರಹೊಮ್ಮಿದವು.
ತಮ್ಮನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ರೋಹಿತ್ ಶರ್ಮಾ ಅಸಮಾಧಾನಗೊಂಡಿದ್ದು, ಮುಂದಿನ ಆವೃತ್ತಿಯಲ್ಲಿ ಅವರು ಫ್ರಾಂಚೈಸಿಯಲ್ಲಿ ಉಳಿಯುತ್ತಾರೆಯೇ ಎಂಬುದು ಸದ್ಯಕ್ಕೆ ಕುತೂಹಲಕಾರಿ ವಿಚಾರವಾಗಿದೆ. ಐಪಿಎಲ್ 2025ನೇ ಆವೃತ್ತಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
Advertisement