
ಗಯಾನಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಉಗಾಂಡ ಹೀನಾಯ ದಾಖಲೆ ಬರೆದಿದ್ದು, ವಿಂಡೀಸ್ ವಿರುದ್ಧ ಕೇವಲ 39ರನ್ ಗಳಿಗೆ ಆಲೌಟ್ ಆಗಿ, 134 ರನ್ ಗಳ ಹೀನಾಯ ಸೋಲು ಕಂಡಿದೆ.
ಹೌದು.. ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ನೀಡಿದ 174ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಉಗಾಂಡ ಕೇವಲ 39ರನ್ ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕೆಳ ಕ್ರಮಾಂಕದ ಜುಮಾ ಮಿಯಾಗಿ (ಅಜೇಯ 13) ಅವರನ್ನು ಹೊರತುಪಡಿಸಿ ತಂಡದ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಿಲ್ಲ.
12 ಓವರ್ ನಲ್ಲೇ ಉಗಾಂಡ 39 ರನ್ ಗಳಿಗೇ ಆಲೌಟ್ ಆಯಿತು. ವಿಂಡೀಸ್ ಪರ ಅಕೀಲ್ ಹೊಸೇನ್ 5 ವಿಕೆಟ್ ಪಡೆದು ಉಗಾಂಡ ಪತನಕ್ಕೆ ಕಾರಣರಾದರು. ಅಲ್ಜಾರಿ ಜೋಸೆಫ್ 2 ವಿಕೆಟ್ ಮತ್ತು ರೊಮಾರಿಯೋ ಶೆಫರ್ಡ್, ಆ್ಯಂಡ್ರೆ ರಸೆಲ್ ಮತ್ತು ಮೊಟಿ ತಲಾ ಒಂದು ವಿಕೆಟ್ ಪಡೆದರು.
ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ 2ನೇ ತಂಡ
ಉಗಾಂಡ ತಂಡವು ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ದಾಖಲೆ ಬರೆದಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಕೇವಲ 39 ರನ್ಗಳಿಗೆ ಆಲೌಟ್ ಆಗುವ ಮೂಲಕ ಟಿ20 ವಿಶ್ವಕಪ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2014ರಲ್ಲಿ ನೆದರ್ಲ್ಯಾಂಡ್ಸ್ ತಂಡವು 39 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ ಉಗಾಂಡ ಈ ಕಳಪೆ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.
ಭರ್ಜರಿ ಬ್ಯಾಟಿಂಗ್ ಮಾಡಿದ ವಿಂಡೀಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪರ ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ 44 ರನ್ ಬಾರಿಸಿ ಮಿಂಚಿದ್ದರು. ಆ ಬಳಿಕ ಬಂದ ನಿಕೋಲಸ್ ಪೂರನ್ 17 ಎಸೆತಗಳಲ್ಲಿ 22 ರನ್ ಬಾರಿಸಿದರೆ, ರೋವ್ಮನ್ ಪೊವೆಲ್ 23 ರನ್ಗಳ ಕೊಡುಗೆ ನೀಡಿದರು.
ಇನ್ನು ಎಡಗೈ ದಾಂಡಿಗ ಶೆರ್ಫೆನ್ ರುದರ್ಫೋರ್ಡ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ನಡುವೆ ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 17 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 30 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
Advertisement