
ನವದೆಹಲಿ: ಭಾರತದ ಕ್ರಿಕೆಟಿಗ ಅರ್ಶ್ ದೀಪ್ ಸಿಂಗ್ ಕುರಿತು ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಟಿವಿ ವಾಹಿನಿಯಲ್ಲಿ ಮಾತನಾಡುತ್ತಿದ್ದ ಕಮ್ರಾನ್ ಅಕ್ಮಲ್ ಭಾರತದ ಕ್ರಿಕೆಟಿಗ ಅರ್ಶ್ ದೀಪ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು. ಪಂದ್ಯದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದ್ದ ವೇಳೆ ಭಾರತಕ್ಕೆ ಸೋಲು ಖಚಿತ ಎನ್ನುವ ಧಾಟಿಯಲ್ಲಿ ಕಮ್ರಾನ್ ಅಕ್ಮಲ್ ಮಾತನಾಡುತ್ತಿದ್ದರು.
ಈ ವೇಳೆ, 'ಪಂದ್ಯದಲ್ಲಿ ಏನಾದರೂ ಆಗಬಹುದು. ಕೊನೆಯ ಓವರ್ ಅನ್ನು ಅರ್ಷದೀಪ್ ಸಿಂಗ್ ಬೌಲ್ ಮಾಡುತ್ತಾರೆ.. ಆದರೆ ಆತ ಉತ್ತಮ ಲಯದಲ್ಲಿ ಇಲ್ಲ.. ಈಗಾಗಲೇ ಸಮಯ 12.. ಸಿಖ್ ವ್ಯಕ್ತಿ 12 ಗಂಟೆ ನಂತರ ಏನು ಮಾಡಬಲ್ಲ.. ಎಂದು ವ್ಯಂಗ್ಯವಾಗಿ ಹೇಳಿದ್ದರು.
ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗುತ್ತಿರುವಂತೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು. ‘ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಮ್ರಾನ್ ಅಕ್ಮಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಎಚ್ಚೆತ್ತ ಅಕ್ಮಲ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಕ್ಷಮೆ ಕೇಳಿದ ಅಕ್ಮಲ್
ವಿವಾದಾತ್ಮಕ ಹೇಳಿಕೆಗೆ ಭಾರೀ ಟಿಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಮ್ರಾನ್ ಅಕ್ಮಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕ್ಷಮೆ ಯಾಚಿಸಿದ್ದಾರೆ. “ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ. ನಿಜವಾಗಿಯೂ ಕ್ಷಮೆ ಯಾಚಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಪಾಕ್ ವಿರುದ್ಧ ವಿರೋಚಿತ ಜಯ ಸಾಧಿಸಿದ್ದ ಭಾರತ
ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಪಾಕ್ ಬೌಲರ್ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಇಲ್ಲಿಂದ ಪಾಕ್ ಕುಸಿತ ಕೂಡ ಆರಂಭವಾಯಿಯು. ಕೊನೆಗೂ ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.
Advertisement