
ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಹೀನಾಯ ಪ್ರದರ್ಶನ ತೋರಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಹೌದು.. ಪಾಕಿಸ್ತಾನದ ಗುಜ್ರಾನ್‌ವಾಲಾ ನಗರದ ವಕೀಲರೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮತ್ತು ತಂಡದ ಇತರೆ ಆಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಆಟಗಾರರು ಮಾತ್ರವಲ್ಲದೇ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಸೇರಿ ಹಲವು ಸಿಬ್ಬಂದಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಳಪೆ ಪ್ರದರ್ಶನದಿಂದ ಪ್ರಕರಣ ದಾಖಲು
ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನ ತಂಡ ನಿರೀಕ್ಷೆಗೂ ಮೀರಿದ ಕಳಪೆ ಪ್ರದರ್ಶನ ನೀಡಿದೆ. ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಸೋತ ಪಾಕ್ ಪಡೆ ಇದೀಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಅದರಲ್ಲೂ ಕ್ರಿಕೆಟ್ ಶಿಶು ಅಮೆರಿಕ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕ್ ತಂಡದ ಸೋಲಿಗೆ ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಹೀಗಾಗಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ವಕೀಲರೊಬ್ಬರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನ ತಂಡದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಇಡೀ ತಂಡ ದೇಶಕ್ಕೆ ದ್ರೋಹ ಬಗೆದಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಪಾಕಿಸ್ತಾನಿ ಸುದ್ದಿ ವಾಹಿನಿಯ ಪ್ರಕಾರ, ಅಮೆರಿಕ ಮತ್ತು ಭಾರತದ ವಿರುದ್ಧದ ಸೋಲಿನಿಂದ ತನಗೆ ತೀವ್ರ ನೋವಾಗಿದೆ ಎಂದು ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ. ದೇಶದ ಗೌರವವನ್ನು ಪಣಕ್ಕಿಟ್ಟು ವಂಚನೆಯಿಂದ ಕ್ಯಾಪ್ಟನ್ ಬಾಬರ್ ಆಝಂ ಪಡೆ ಹಣ ಗಳಿಸುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಕೀಲರು ಆಗ್ರಹಿಸಿದ್ದು, ಅದು ಪೂರ್ಣಗೊಳ್ಳುವವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಿಷೇಧಿಸುವಂತೆ ಕೋರಿದ್ದಾರೆ. ವರದಿಯ ಪ್ರಕಾರ, ಈ ಅರ್ಜಿಯನ್ನು ಸಹ ಅನುಮೋದಿಸಲಾಗಿದೆ.
ಮುಂದುವರೆದ ಪಾಕಿಸ್ತಾನದ ಹೀನಾಯ ಪ್ರದರ್ಶನ
ಕಳೆದ ವರ್ಷ ನಡೆದ ಏಷ್ಯಾಕಪ್ನಿಂದ ಶುರುವಾದ ಪಾಕ್ ತಂಡದ ಸಂಕಷ್ಟಗಳ ಸರಮಾಲೆ ಇದುವರೆಗು ಮುಂದುವರೆಯುತ್ತಲೇ ಇವೆ. ಇದೀಗ ಇಂತಹದ್ದೇ ಹೊಸ ಸಂಕಷ್ಟವೊಂದು ಪಾಕ್ ತಂಡದ ಕೊರಳಿಗೆ ಸುತ್ತಿಕೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಅಮೆರಿಕ ಮತ್ತು ಭಾರತದ (USA and India) ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ದ ಬಾಬರ್ ಪಡೆಯ ವಿರುದ್ಧ ಪಾಕಿಸ್ತಾನದಲ್ಲಿ ದೇಶದ್ರೋಹದ ಪ್ರಕರಣ (Treason Charges) ದಾಖಲಾಗಿದೆ ಎಂದು ವರದಿಯಾಗಿದೆ.
Advertisement