
ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತಕ್ಕೆ ಪ್ರವೇಶಿಸುವ ಸ್ಕಾಟ್ಲೆಂಡ್ ತಂಡದ ಕನಸು ಭಗ್ನವಾಗಿದ್ದು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಬಿ ಗುಂಪಿನಿಂದ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿವೆ.
ಸೆಂಟ್ ಲೂಸಿಯಾದಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ, ಇಂಗ್ಲೆಂಡ್ ಸೂಪರ್ 8 ಹಂತಕ್ಕೆ ತಲುಪಲು ಸಹಾಯ ಮಾಡಿತು. ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಲಾ 5 ಅಂಕಗಳನ್ನು ಹೊಂದಿದ್ದರೂ ರನ್ ರೇಟ್ ಉತ್ತಮವಾಗಿದ್ದ ಕಾರಣ ಇಂಗ್ಲೆಂಡ್ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಕಿಯಾದ ಬಲಿಷ್ಠ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸ್ಕಾಟ್ಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಗಳಿಸುವ ಮೂಲಕ ಸವಾಲಿನ ಗುರಿಯನ್ನು ನೀಡಿತು.
ಬ್ರೆಂಡನ್ ಮೆಕ್‌ಮುಲನ್ 34 ಎಸೆತಗಳಲ್ಲಿ 60 ರನ್ ಗಳಿಸುವ ಮೂಲಕ ಸ್ಕಾಟ್ಲೆಂಡ್ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ನಾಯಕ ಬೆರ್‍ರಿಂಗ್ಟನ್ ಅಜೇಯ 42 ರನ್ ಗಳಿಸಿದರೆ, ಮುನ್ಸೆ 35 ರನ್ ಗಳಿಸಿದರು.
181 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಹಂತದಲ್ಲಿ ರನ್ ಗಳಿಸಲು ಪರದಾಡಿತು. ಡೇವಿಡ್ ವಾರ್ನರ್ ಕೇವಲ ಒಂದು ರನ್ ಗಳಿಸಿ ಔಟಾದರೆ, ನಾಯಕ ಮಿಚ್ ಮಾರ್ಷ್ 8 ರನ್ ಗಳಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ 11 ರನ್ ಗಳಿಸಿ ಔಟಾದರು. 50 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಆಸರೆಯಾದರು.
ಟ್ರಾವಿಸ್ ಹೆಡ್ 49 ಎಸೆತಗಳಲ್ಲಿ 68 ರನ್ ಗಳಿಸಿದರೆ, ಮಾರ್ಕಸ್ ಸ್ಟೊಯಿನಿಸ್ 29 ಎಸೆತಗಳಲ್ಲಿ 59 ರನ್ ಗಳಿಸಿದರು. ಟಿಮ್ ಡೇವಿಡ್ 14 ಎಸೆತಗಳಲ್ಲಿ ಅಜೇಯ 24 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ತಲುಪಿಸಿದರು. 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿದ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದು, ಸೂಪರ್ 8 ತಲುಪಿತು.
Advertisement