
ನ್ಯೂಯಾರ್ಕ್: ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅಭಿಮಾನಿಯ ಸೆಲ್ಫಿ ತೆಗೆದುಕೊಳ್ಳುವ ಮನವಿಯನ್ನು ತಿರಸ್ಕರಿಸಿದ್ದು ಅಲ್ಲದೆ ಆ ಅಭಿಮಾನಿಯನ್ನು ಹೊಡೆಯಲು ಮುಂದಾದ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ ಹೊರಬಿದ್ದ ನಂತರ ಹ್ಯಾರಿಸ್ ರೌಫ್ ತನ್ನ ಕುಟುಂಬದೊಂದಿಗೆ ಯುಎಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ.
ಪಾರ್ಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ಕುರಿತಂತೆ ಅಭಿಮಾನಿ ಹಾಗೂ ಹ್ಯಾರಿಸ್ ರೌಫ್ ನಡುವೆ ಮಾತಿನ ಚಕಮಿಕಿ ನಡೆದಿದೆ. ಈ ವೇಳೆ ಕೆರಳಿದ ಹ್ಯಾರಿಸ್ ಓಡಿಬಂದು ಅಭಿಮಾನಿ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಈ ವೇಳೆ ಪತ್ನಿ ಹ್ಯಾರಿಸ್ ರೌಫ್ ನನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಆಕೆಯ ಕೈಯಿಗಳಿಂದ ಬಿಡಿಸಿಕೊಂಡು ಬಂದ ರೌಫ್ ಅಭಿಮಾನಿ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ರೌಫ್ ನನ್ನು ತಡೆದಿದ್ದಾರೆ.
ಈ ವೇಳೆ ರೌಫ್ ಮತ್ತು ವ್ಯಕ್ತಿಯು ಬೈದಾಡಿಕೊಂಡಿದ್ದಾರೆ. ಸಂಭಾಷಣೆಯ ವೇಳೆ, ಹ್ಯಾರಿಸ್ ರೌಫ್ ಅಭಿಮಾನಿಗೆ 'ತೇರಾ ಇಂಡಿಯಾ ನಹೀ ಹೈ ಯೇ'(ಇದು ನಿನ್ನ ಭಾರತ ಅಲ್ಲ) ಎಂದು ಕೂಗುತ್ತಾನೆ. ಅದಕ್ಕೆ ಅಭಿಮಾನಿ "ಪಾಕಿಸ್ತಾನ್ ಸೆ ಹೂನ್"(ನಾನು ಪಾಕಿಸ್ತಾನದವನು) ಎಂದು ಉತ್ತರಿಸುತ್ತಾನೆ.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಹ್ಯಾರಿಸ್ ರೌಫ್ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಗ್ರೂಪ್ ಹಂತದಲ್ಲಿ ಅಮೆರಿಕ ಮತ್ತು ಭಾರತ ವಿರುದ್ಧ ಸೋತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಟೂರ್ನಿಯಲ್ಲಿ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು.
Advertisement