
ಫ್ಲೋರಿಡಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಟೂರ್ನಿಯಿಂದಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅಭಿಮಾನಿಗಳ ಆಕ್ರೋಶ ಮುಂದುವರೆದಿದ್ದು, ಪ್ರಶ್ನಿಸಿದ ಅಭಿಮಾನಿಯನ್ನೇ ಪಾಕ್ ಕ್ರಿಕೆಟಿಗ ಥಳಿಸಲು ಮುಂದಾದ ಘಟನೆ ವರದಿಯಾಗಿದೆ.
ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡದ ಆಟಗಾರರು ಫ್ಲೋರಿಡಾದಲ್ಲಿ ಕೆಲ ದಿನಗಳ ಕಾಲ ಎಂಜಾಯ್ ಮಾಡಲಿದ್ದಾರೆ. ಹ್ಯಾರಿಸ್ ರೌಫ್ ಕೂಡ ತಮ್ಮ ಪತ್ನಿ ಜತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ.
ಇದೇ ವೇಳೆ ತಾವು ತಂಗಿದ್ದ ಹೋಟೆಲ್ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದಾನೆ. ಈ ವೇಳೆ ರೌಫ್, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಪಾಕಿಸ್ತಾನದ ಪ್ರದರ್ಶನದ ಕುರಿತು ಟೀಕೆ ಮಾಡಿದ್ದಾನೆ.
ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಹಲ್ಲೆಗೆ ಮುಂದಾದ ಹ್ಯಾರಿಸ್ ರೌಫ್(Angry Haris Rauf) ಅವರನ್ನು ಅವರ ಪತ್ನಿ ತಡೆದು ನಿಲ್ಲಿಸಿದ್ದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಪತ್ನಿ ರೌಫ್ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್ ಅವರ ಮ್ಯಾನೇಜರ್ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ.
ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡಿಸಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೌಫ್ ಅವರ ಈ ದರ್ಪವನ್ನು ಅನೇಕ ನೆಟ್ಟಿಗರು ಮತ್ತು ಪಾಕ್ ಅಭಿಮಾನಿಗಳು ಖಂಡಿಸಿದ್ದಾರೆ.
Advertisement