ಗಯಾನ: ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲಾಢ್ಯ ತಂಡಗಳನ್ನು ಮಣಿಸಿ ಭಾರತ ತಂಡ ಅರ್ಹವಾಗಿಯೇ ಫೈನಲ್ ಗೇರಿದ್ದು, ಈ ನಡುವೆ ಭಾರತ ತಂಡವನ್ನು ಐಸಿಸಿ ನಡೆಸಿಕೊಳ್ಳುತ್ತಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಚಕಾರವೆತ್ತಿದ್ದಾರೆ.
ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಭಾರತ ತಂಡಕ್ಕಾಗಿಯೇ ಮಾಡಲಾಗುತ್ತಿದ್ದು, ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸ್ವಲ್ಪವಾದರೂ ನ್ಯಾಯಸಮ್ಮತವಾಗಿರಬೇಕಿತ್ತು. ಆರ್ಥಿಕವಾಗಿ ಬಲಾಢ್ಯವಾಗಿರುವ ಬಿಸಿಸಿಐ ಮತ್ತು ಭಾರತವು ಐಸಿಸಿ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಯೂಟ್ಯೂಬ್ ಚಾನೆಲ್ ಕ್ಲಬ್ ಪ್ರಯರೀ ಫೈರ್‘ ಪಾಡ್‌ಕಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್ ಅವರೊಂದಿಗಿನ ಮಾತುಕತೆ ವೇಳೆ ಮೈಕಲ್ ವಾನ್ ಈ ರೀತಿ ಹೇಳಿಕೆ ನೀಡಿದ್ದು, ''ಈ ಟೂರ್ನಿಯು ಭಾರತ ತಂಡದ್ದೇ ಆಗಿದೆ ಅಲ್ಲವೇ? ತಮಗೆ ಅನುಕೂಲವಾದ ಸಮಯಕ್ಕೆ ಪಂದ್ಯಗಳನ್ನು ನಿಗದಿ ಮಾಡಿಸಿಕೊಂಡಿದ್ದಾರೆ. ವೇಳಾಪಟ್ಟಿಯು ಅವರ ಅನುಕೂಲಕ್ಕೆ ತಕ್ಕಂತೆ ಇದೆ.
ಭಾರತ ತಂಡವು ಆಡಿದ ಪ್ರತಿಯೊಂದು ಪಂದ್ಯವೂ ಇಲ್ಲಿ (ಆತಿಥ್ಯದ ತಾಣ) ಬೆಳಗಿನ ಅವಧಿಯಲ್ಲಿಯೇ ಆಯೋಜನೆಗೊಂಡಿವೆ. ಭಾರತದಲ್ಲಿ ಜನರು ರಾತ್ರಿ ಹೊತ್ತು ಟಿ.ವಿ.ಯಲ್ಲಿ ಪಂದ್ಯದ ನೇರಪ್ರಸಾರ ನೋಡಲು ಸಾಧ್ಯವಾಗಲೆಂದು ಈ ರೀತಿ ಮಾಡಲಾಗಿದೆ. ಅದೇ ರೀತಿ ಅವರ (ಭಾರತ) ಸೆಮಿಫೈನಲ್ ಕೂಡ ಬೆಳಿಗ್ಗೆಯೇ ಇದೆ’ ಎಂದು ಹೇಳಿದ್ದಾರೆ.
ಅಂತೆಯೇ ‘ಐಸಿಸಿಯು ಎಲ್ಲ ದೇಶಗಳ ತಂಡಗಳಿಗೂ ಸಮಾನ ಆದ್ಯತೆ ನೀಡಬೇಕಿತ್ತು. ವಿಶ್ವಕಪ್ ಟೂರ್ನಿ ಎಂದ ಮೇಲೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು. ಒಬ್ಬರ ಬಗ್ಗೆಯೇ ಕರುಣೆ ಅಥವಾ ಒಲವು ಇರುವುದು ಸರಿಯಲ್ಲ’ ಎಂದು ವಾನ್ ಹೇಳಿದ್ದಾರೆ.
ವಾನ್ ಹೇಳಿಕೆಗೆ ಬೆಂಬಲ ನೀಡಿದ ಗಿಲ್ ಕ್ರಿಸ್ಟ್
ಇನ್ನು ಮೈಕಲ್ ವಾನ್ ಹೇಳಿಕೆಯನ್ನು ಬೆಂಬಲಿಸುವಂತೆ ಮಾತನಾಡಿದ ಆಸಿಸ್ ಮಾಜಿ ಕ್ರಿಕೆಟ್ ಆಟಗಾರ ಆ್ಯಡಂ ಗಿಲ್ ಕ್ರಿಸ್ಟ್, ‘ಕ್ರಿಕೆಟ್ ಬಗ್ಗೆ ನಿಜವಾದ ಪ್ರೀತಿ ಇಟ್ಟುಕೊಂಡ ಅಭಿಮಾನಿಗಳೂ ಅಪಾರ ಸಂಖ್ಯೆಯಲ್ಲಿದ್ದಾರೆ. ವೇಳಾಪಟ್ಟಿಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇಲ್ಲಿ ಭಾರತ ಉತ್ತಮ ತಂಡವಾಗಿದೆ. ಟೂರ್ನಿಯಲ್ಲಿ ಇದುವರೆಗೂ ಒಂದೂ ಪಂದ್ಯ ಸೋತಿಲ್ಲ. ದಕ್ಷಿಣ ಆಫ್ರಿಕಾ ಕೂಡ ಅಷ್ಟೇ. ಆದರೆ ಈ ಟೂರ್ನಿಯಲ್ಲಿ ಭಾರತ ಗೆದ್ದು ತೋರಿಸಬೇಕು’ ಎಂದರು.
ವಿಚಿತ್ರ ತಿರುಗೇಟು ಕೊಟ್ಟ ಆರ್ ಅಶ್ವಿನ್
ಮೈಕಲ್ ವಾನ್ ಹೇಳಿಕೆ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಇತ್ತ ಗಣಿತ ಸೂತ್ರಗಳ ಮೂಲಕ ಟ್ವೀಟ್ ಮಾಡಿರುವ ಆರ್ ಅಶ್ವಿನ್ ವಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೊನೆಯಲ್ಲಿ ಭಾರತ ಗೆದ್ದಿದೆ ಎಂದು ಹೇಳುವ ಮೂಲಕ ಇಂಗ್ಲೆಂಡ್ ತಂಡದ ಪರವಾಗಿ ಹೇಳಿಕೆ ನೀಡಿದ್ದ ವಾನ್ ಗೆ ತಿರುಗೇಟು ನೀಡಿದ್ದಾರೆ.
Advertisement