ICC T20 World Cup 2024 ಫೈನಲ್ ಪಂದ್ಯಕ್ಕೂ ಮಳೆಕಾಟ; ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ? ಇಲ್ಲಿದೆ ಮಾಹಿತಿ

ಭಾರತ vs ಇಂಗ್ಲೆಂಡ್ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಇನ್ನಿಲ್ಲದಂತೆ ಕಾಡಿದ್ದ ಮಳೆರಾಯ ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ.
India vs South Africa
ಭಾರತ vs ದಕ್ಷಿಣ ಆಫ್ರಿಕಾ
Updated on

ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ನಾಳೆ ಬಾರ್ಬಡೋಸ್ ನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಹೌದು.. ಭಾರತ vs ಇಂಗ್ಲೆಂಡ್ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಇನ್ನಿಲ್ಲದಂತೆ ಕಾಡಿದ್ದ ಮಳೆರಾಯ ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ. ಹಮಾವಾನ ಇಲಾಖೆ ಮೂಲಗಳ ಪ್ರಕಾರ ನಾಳೆ ಬಾರ್ಬಡೋಸ್ ನಲ್ಲಿ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೀಗಾಗಿ ನಾಳಿನ ಫೈನಲ್ ಪಂದ್ಯಕ್ಕೂ ಮಳೆ ಕರಿನೆರಳು ಇದ್ದು, ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಪ್ರಶಸ್ತಿ ಘೋಷಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೇ ಅಜೇಯವಾಗಿ ಉಳಿದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ನಲ್ಲಿ ಪ್ರಶಸ್ತಿಗಾಗಿ ಕಾದಾಡುತ್ತಿದ್ದು, ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿದೆ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿದೆ.

ಈ ಬಾರಿ ಫೈನಲ್ ಗೆದ್ದು ತನ್ನ ಹಣೆಗೆ ಅಂಟಿರುವ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕಲು ಏಡನ್ ಮರ್ಕ್ರಾಮ್ ಪಡೆ ಉತ್ಸುಕವಾಗಿದ್ದು, ಐಸಿಸಿ ವಿಶ್ವಕಪ್ ನಲ್ಲಿ ಬರೊಬ್ಬರಿ 10 ವರ್ಷಗಳ ಬಳಿಕ ಫೈನಲ್ ಗೇರಿರುವ ಭಾರತ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಹೀಗಾಗಿ ನಾಳಿನ ಕದನ ತೀವ್ರ ಕುತೂಹಲ ಕೆರಳಿಸಿದೆ. ನಾಳೆ ಅಂದರೆ ಶನಿವಾರ ಬಾರ್ಬಡೋಸ್​ನಲ್ಲಿ(Barbados Weather Forecast) ಕೂಟದ ಅಜೇಯ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಭಾರತ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಆದರೆ, ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

ಶೇ.70ರಷ್ಟು ಮಳೆ ಸಾಧ್ಯತೆ

ಇಂಗ್ಲೆಂಡ್​ ಮತ್ತು ಭಾರತ ನಡುವಣ ಸೆಮಿ ಫೈನಲ್​ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಇದೀಗ ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಫೈನಲ್ ಪಂದ್ಯಕ್ಕೆ ಮೀಸಲು

ಇನ್ನು ಹಾಲಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನು ಇರಿಸಿದ್ದು, ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 ಹಂತದಲ್ಲಿ ಮತ್ತು ಸೆಮಿಫೈನಲ್​ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್​ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.

ಜಂಟಿ ವಿಜೇತರ ಘೋಷಣೆ

ಒಂದು ವೇಳೆ ಫೈನಲ್‌(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗಿತ್ತು.

ಭಾರತ-ಶ್ರೀಲಂಕಾ ಪಂದ್ಯದ ಇತಿಹಾಸ

ಕೊಲಂಬೊದಲ್ಲಿ ನಡೆದಿದ್ದ ಆ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 5 ವಿಕೆಟ್​ಗೆ 244 ರನ್ ಗಳಿಸಿತು. ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದ್ದ ವೇಳೆ ಜೋರಾಗಿ ಮಳೆ ಸುರಿಯಿತು. ಮಳೆ ಬಿಡುವು ನೀಡದೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು.

ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಪೂರ್ಣ ಫಲಿತಾಂಶ ಕಾಣದಿದ್ದರೆ ಉಭಯ ತಂಡಗಳು ಕೂಡ ಜಂಟಿ ಚಾಂಪಿಯನ್​ ಎನಿಸಿಕೊಳ್ಳಲಿದೆ. ಭಾರತ 2ನೇ ಕಪ್​ ಗೆದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದಂತಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com