ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಭಾರತ ಕ್ರಿಕೆಟ್ ಪ್ರೇಮಿಗಳಿಗೆ 3ನೇ ಶಾಕ್ ಎದುರಾಗಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬೆನ್ನಲ್ಲೇ ತಂಡದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಹೌದು.. ಬರೊಬ್ಬರಿ 17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು, ಭಾರತ ತಂಡದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಇರುವಾಗಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಶಾಕ್ ಕೊಟ್ಟಿದ್ದರು.
ಇದೀಗ ರವೀಂದ್ರ ಜಡೇಜಾ ಕೂಡ ವಿದಾಯ ಹೇಳಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರವೀಂದ್ರ ಜಡೇಜಾ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಮೂರನೇ ದಿಗ್ಗಜ ಆಟಗಾರ ವಿದಾಯ ಹೇಳಿದಂತಾಗಿದೆ. ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಭಾರತ ತಂಡದ ಅಭಿಮಾನಿಗಳಿಗೆ ಪ್ರಮುಖ ಆಟಗಾರರು ವಿದಾಯ ಹೇಳುತ್ತಿರುವುದು ಬೇಸರ ತಂದಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಜಡ್ಡು ಭಾವನಾತ್ಮಕ ಪೋಸ್ಟ್
ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿದಾಯದ ಕುರಿತು ಪೋಸ್ಟ್ ಮಾಡಿರುವ ರವೀಂದ್ರ ಜಡೇಜಾ, “ಧನ್ಯವಾದ ತುಂಬಿದ ಹೃದಯದಿಂದ ನಾನು T20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ.
ಟಿ20 ವಿಶ್ವಕಪ್ ಗೆಲ್ಲುವುದು ನನ್ನ ಕನಸು.. ಈಗ ಅದು ನನಸಾಗಿದೆ, ಇದು ನನ್ನ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.
ಭಾರತ ತಂಡದ ಅಮೋಘ ಆಲ್ರೌಂಡರ್
ಭಾರತ ಕ್ರಿಕೆಟ್ ತಂಡ ಕಂಡ ಪ್ರತಿಭಾನ್ವಿತ ಆಲ್ರೌಂಡರ್ ಗಳಲ್ಲಿ ರವೀಂದ್ರ ಜಡೇಜಾ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. 35 ವರ್ಷದ ಜಡೇಜಾ ಈವರೆಗೂ 74 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 41 ಇನ್ನಿಂಗ್ಸ್‌ಗಳಲ್ಲಿ 515 ರನ್ ಗಳಿಸಿದ್ದಾರೆ. 54 ವಿಕೆಟ್ ಪಡೆದಿರುವ ಅವರು ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಗಳಲ್ಲಿ ಒಬ್ಬರಾಗಿದ್ದಾರೆ.
ಅಂದಹಾಗೆ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಮಾತ್ರ ವಿದಾಯ ಹೇಳಿದ್ದು, ಐಪಿಎಲ್‌ನಲ್ಲಿ ಜಡೇಜಾ ಆಡಲಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಕೂಡ ಅವರ ಆಟ ಮುಂದುವರೆಯಲಿದೆ.
Advertisement