ಲಖನೌ: ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಲಖನೌನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಮ್ನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 199 ರನ್ ಬಾರಿಸಿತು.
ಆ ಮೂಲಕ ಪಂಜಾಬ್ ಗೆ ಗೆಲ್ಲಲು 200 ರನ್ ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ಗೆ 178 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 21 ರನ್ ಗಳ ಸೋಲು ಕಂಡಿತು.
ಲಖನೌ ಪರ ಕ್ವಿಂಟನ್ ಡಿಕಾಕ್ ಅರ್ಧಶತಕ ಸಿಡಿಸಿದರೆ, ನಾಯಕ ನಿಕೋಲಸ್ ಪೂರನ್ 42 ರನ್ ಮತ್ತು ಕೃಣಾಲ್ ಪಾಂಡ್ಯ ಅಜೇಯ 43 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಇತ್ತ ಪಂಜಾಬ್ ಪರ ನಾಯಕ ಶಿಖರ್ ಧವನ್ 70ರನ್ ಸಿಡಿಸಿದರೆ, ಜಾನಿ ಬೇರ್ ಸ್ಟೋ 42 ರನ್ ಗಳಿಸಿದರು. ಉತ್ತಮ ಆರಂಭ ಪಡೆದ ಪಂಜಾಬ್ ತಂಡ ಮೊದಲ ವಿಕೆಟ್ ಗೆ 100 ರನ್ ಗಳ ಜೊತೆಯಾಟ ನೀಡಿ ಗೆಲುವಿನತ್ತ ದಾಪುಗಾಲಿರಿಸಿತ್ತು. ಆದರೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡದ ಸೋಲಿಗೆ ಕಾರಣವಾಯಿತು.
ಲಖನೌ ಪರ 3 ವಿಕೆಟ್ ಪಡೆದ ಮಯಾಂಕ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement