
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು, ವೆಸ್ಟ್ ಇಂಡೀಸ್ ವಿರುದ್ದ ಲಾರ್ಡ್ಸ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿಯಾಗಲಿದ್ದಾರೆ.
ಹೌದು.. ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು, ಆ ಮೂಲಕ ತಮ್ಮ 22 ವರ್ಷಗಳ ಸುಧೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಆ್ಯಂಡರ್ಸನ್, 'ಸತತ 22 ವರ್ಷಗಳ ಕಾಲ ನನ್ನ ದೇಶವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಿದ್ದೆ. ನಾನು ಚಿಕ್ಕವನಾಗಿದ್ದಾಗಿನಿಂದ ನಾನು ಇಷ್ಟಪಟ್ಟ ಆಟವನ್ನು ಆಡುತ್ತಿದ್ದೇನೆ. ನಾನು ಇಂಗ್ಲೆಂಡ್ ತಂಡದ ಹೊರಗುಳಿಯುವುದರಿಂದ ಸಾಕಷ್ಟು ಕಳೆದುಕೊಳ್ಳಲಿದ್ದೇನೆ'.
'ಆದರೆ ನಾನು ಪಕ್ಕಕ್ಕೆ ಸರಿಯಲು ಇದು ಸೂಕ್ತ ಸಮಯ. ನನ್ನಂತೆಯೇ ಇತರರು ಕೂಡ ತಮ್ಮ ಕನಸುಗಳನ್ನು ನನಸಾಗಿಸಲು ಅವಕಾಶ ಮಾಡಿಕೊಡಬೇಕು. ಮುಂದೆ ಇರುವ ಹೊಸ ಸವಾಲುಗಳಿಗೆ ನಾನು ಉತ್ಸುಕನಾಗಿದ್ದೇನೆ' ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ವೃತ್ತಿಜೀವನದುದ್ದಕ್ಕೂ ಅವರ ಬೆಂಬಲ ನಿಂತ ಕುಟುಂಬ, ತರಬೇತುದಾರರು ಮತ್ತು ಆಟಗಾರರಿಗೆ ಆ್ಯಂಡರ್ಸನ್ ಧನ್ಯವಾದಗಳನ್ನು ಅರ್ಪಿಸಿದರು.
ಅಂದಹಾಗೆ 2003ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್ ಈ ವರೆಗೂ 187 ಟೆಸ್ಟ್ ಪಂದ್ಯವನ್ನಾಡಿದ್ದು, 700 ವಿಕೆಟ್ ಗಳನ್ನು ಕಬಳಿಸಿದ್ದಾರೆ.
Advertisement