
ಮುಂಬೈ: ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಮಾಲೀಕ ಸಂಜೀವ್ ಗೊಯಂಕಾ ನಡುವಿನ ಸಂಘರ್ಷಕ್ಕೆ ಔಣತಣಕೂಟದ ಮೂಲಕ ತೆರೆ ಬಿದ್ದಿದೆಯಾದರೂ, ಮೈದಾನದಲ್ಲಿ ಪತಿಗಾದ ಅಪಮಾನವನ್ನು ಮಾತ್ರ ರಾಹುಲ್ ಪತ್ನಿ ಹಾಗೂ ನಟಿ ಅಥಿಯಾ ಶೆಟ್ಟಿ ಮರೆತಂತೆ ಕಾಣುತ್ತಿಲ್ಲ.
ಅತ್ತ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ರನ್ನು ಔತಣಕೂಟಕ್ಕೆ ಕರೆದು ವಿವಾದ ಬಗೆಹರಿಸಿದ ಬೆನ್ನಲ್ಲೇ ಇನ್ ಸ್ಟಾಗ್ರಾಮ್ ನಲ್ಲಿ Cryptic ಪೋಸ್ಟ್ ಮಾಡಿರುವ ಅಥಿಯಾ ಶೆಟ್ಟಿ, "The calm after the storm'' ("ಚಂಡಮಾರುತದ ನಂತರ ಶಾಂತತೆ") ಎಂದು ಪೋಸ್ಟ್ ಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದ ಸೋಲಿನ ಬಳಿಕ ಮೈದಾನದಲ್ಲೇ ಸಂಜೀವ್ ಗೋಯೆಂಕಾ ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಎಗರಾಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು.
ಒಂದು ಹಂತದಲ್ಲಿ ಆಪ್ತ ವಲಯದಲ್ಲಿ ಕೆಎಲ್ ರಾಹುಲ್ ಕೂಡ ಮುಂದಿನ ಐಪಿಎಲ್ ಟೂರ್ನಿ ಹೊತ್ತಿಗೆ ತಂಡ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿತ್ತು. ರಾಹುಲ್ ಲಕ್ನೋ ತಂಡ ತೊರೆದು ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ವರದಿಗಳೂ ಮುನ್ನಲೆಗೆ ಬಂದಿತ್ತು.
ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ ಲಕ್ನೋ ತಂಡ ಆಗಬಹುದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತು ತಂಡದ ಹಿತಾಸಕ್ತಿ ದೃಷ್ಟಿಯಿಂದ ವಿವಾದಕ್ಕೆ ತೆರೆ ಎಳೆಯಲು ರಾಹುಲ್ ಗೆ ಔತಣಕೂಟ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ರಾಹುಲ್ ರನ್ನು ಉದ್ಯಮಿ ಸಂಜೀವ್ ಗೋಯೆಂಕಾ ಆತ್ಮೀಯವಾಗಿ ಬರಮಾಡಿಕೊಂಡಿದ್ದು ಮಾತ್ರವಲ್ಲದೇ, ಪರಸ್ಪರ ಆಲಂಗಿಸಿಕೊಂಡು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
Advertisement