
ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಐಪಿಎಲ್ 2024ರ ನಿರಾಸೆ ಸಾಕಾದಂತೆ ಕಾಣುತ್ತಿಲ್ಲ. ತಂಡಗಳು ಮುಂದಿನ ಆವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸುವ ಮುನ್ನವೇ ಆಲ್ ರೌಂಡರ್ ಗೆ ಹಿನ್ನಡೆ ಆಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ವರ್ಷದ ಮುಂಬೈ ಇಂಡಿಯನ್ಸ್ ನ ಕೊನೆಯ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಹಾರ್ದಿಕ್ ಅವರನ್ನು ಮುಂದಿನ ಐಪಿಎಲ್ ನ ಮೊದಲ ಪಂದ್ಯದಿಂದ ನಿಷೇಧಿಸಲಾಗಿದೆ ಎಂದು ಬಿಸಿಸಿಐ ಶುಕ್ರವಾರ ತಡರಾತ್ರಿ ಘೋಷಿಸಿದೆ.
ಮೇ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ಕೂಡಾ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡ ಈ ವರ್ಷ ಯಾವುದೇ ಪಂದ್ಯ ಆಡದಿರುವುದರಿಂದ ನಿಷೇಧ ಮುಂದಿನ ಆವೃತ್ತಿಯ ಮೊದಲ ಪಂದ್ಯಕ್ಕೆ ಅನ್ವಯವಾಗುತ್ತದೆ. ಮುಂದಿನ ಬಾರಿಯೂ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಲು ಹಾರ್ದಿಕ್ ಪಾಂಡ್ಯ ಬಯಸಿದರೂ ಆರಂಭಿಕ ಪಂದ್ಯಕ್ಕೆ ಬೇರೆ ನಾಯಕನನ್ನು ಕಣಕ್ಕಿಳಿಸಬೇಕು.
ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ನಂತರ ಈ ವರ್ಷ ನಿಧಾನಗತಿಯ ಓವರ್ ರೇಟ್ ಅಪರಾಧದ ಕಾರಣದಿಂದ ಅಮಾನತುಗೊಂಡ ಎರಡನೇ ಆಟಗಾರ ಹಾರ್ದಿಕ್ ಆಗಿದ್ದಾರೆ. ಪಂತ್ ಅವರಂತೆ, ಹಾರ್ದಿಕ್ ಈ ವರ್ಷ ಮೂರನೇ ಬಾರಿಗೆ ಓವರ್ ರೇಟ್ ಅಪರಾಧಕ್ಕಾಗಿ ಒಂದು ಪಂದ್ಯದ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಅವರಿಗೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ. LSG ವಿರುದ್ಧದ ಇಂಪ್ಯಾಕ್ಟ್ ಆಟಗಾರರು ಸೇರಿದಂತೆ ಮುಂಬೈ ತಂಡದ ಆಟಗಾರರಿಗೆ ರೂ. 12 ಲಕ್ಷ ಅಥವಾ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡ ಹಾಕಲಾಗಿದೆ ಎಂದು ಬಿಸಿಸಿಐ ಹೇಳಿದೆ.
Advertisement