
ಗುವಾಹಟಿ: 17ನೇ ಆವೃತ್ತಿಯ ಐಪಿಎಲ್ನ(IPL 2024) ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, ರಾಜಸ್ಥಾನ್ ರಾಯಲ್ಸ್(RR vs KKR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ.
ಮಳೆಯಿಂದಾಗಿ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದ ಹಿನ್ನಲೆಯಲ್ಲಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದ್ದು, ಅದರಂತೆ ಪಟ್ಟಿಯಲ್ಲಿ ಕೋಲ್ಕತಾ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಇಂದಿನ ಗೆಲುವಿನ ಮೂಲಕ ತನ್ನ ಅಂಕ ಗಳಿಕೆಯನ್ನು 17ಕ್ಕೇರಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ 2ನೇ ಸ್ಥಾನಕ್ಕೇರಿದ್ದು, 2ನೇ ಸ್ಥಾನದಲ್ಲಿದ್ದ ರಾಜಸ್ಥಾನ ಮೂರನೇ ಸ್ಥಾನಕ್ಕೆ ಕುಸಿದಿದೆ.
ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯ ರದ್ದು
10 ಗಂಟೆ ಸುಮಾರಿಗೆ ಮಳೆ ನಿಂತಿತು. ಮಳೆ ನಿಂತ ಕಾರಣ ಪಂದ್ಯವನ್ನು ಡಕ್ವರ್ತ್ ನಿಯಮದ ಪ್ರಕಾರ 7 ಓವರ್ಗೆ ಸೀಮಿತಗೊಳಿಸಿ ಟಾಸ್ ಕೂಡ ಹಾರಿಸಲಾಯಿತು. ಟಾಸ್ ಗೆದ್ದು ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮಳೆ ಮತ್ತೆ ಆರಂಭಗೊಂಡಿತು. ಹೀಗಾಗಿ ಅಂಪೈರ್ಗಳು ಕೊನೆಗೆ ಪಂದ್ಯವನ್ನು ರದ್ದು ಎಂದು ಘೋಷಣೆ ಮಾಡಿದರು. ಕೆಕೆಆರ್ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ಗೆ(Rajasthan Royals) ಮಳೆ ತಣ್ಣೀರೆರಚಿತು.
ಎಲಿಮಿನೇಟರ್ ನಲ್ಲಿ RCB vs RR ಮುಖಾಮುಖಿ!
ಇದೀಗ ರಾಜಸ್ಥಾನ ಮೂರನೇ ಸ್ಥಾನಕ್ಕೆ ಕುಸಿದಿರುವ ಹಿನ್ನಲೆಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಫ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲೂ ಗೆದ್ದು ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ.
ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದೆ.
Advertisement