
ಪಂದ್ಯಾವಳಿಯ ಆರಂಭದಲ್ಲಿ ಆಡಿದ್ದ 8 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸುವ ಮೂಲಕ ನಿರಾಶದಾಯಕ ಪ್ರದರ್ಶನ ನೀಡಿದ್ದ ಆರ್‌ಸಿಬಿ ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಇದೀಗ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಸಿಎಸ್‌ಕೆ ವಿರುದ್ಧದ ರೋಚಕ ಜಯದ ನಂತರ ಆರ್‌ಸಿಬಿ ಅಭಿಮಾನಿಗಳು ಮತ್ತು ಆಟಗಾರರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಮಧ್ಯರಾತ್ರಿಯವರೆಗೂ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
ಮಳೆಯ ನಡುವೆಯೂ ತಡರಾತ್ರಿಯವರೆಗೂ ಬೆಂಗಳೂರಿನ ಬೀದಿಗಳಲ್ಲಿಯೇ ಬೀಡುಬಿಟ್ಟಿದ್ದ ಅಭಿಮಾನಿಗಳು, ಪರಸ್ಪರ ಅಪ್ಪಿಕೊಂಡು ವಿಜಯೋತ್ಸವ ಆಚರಿಸಿದರು. ಅಭಿಮಾನಿಗಳ ಒಂದು ವಿಭಾಗವು ತಡರಾತ್ರಿಯಲ್ಲಿ ಆರ್‌ಸಿಬಿ ಆಟಗಾರರನ್ನು ಹೊತ್ತಿದ್ದ ಬಸ್ ಹೊರಬರಲು ಕಾಯುತ್ತಿದ್ದರು ಮತ್ತು ಸಿಎಸ್‌ಕೆ ವಿರುದ್ಧದ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದರು.
ಪ್ಲೇಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ 18 ರನ್‌ಗಳಿಂದ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಅಂತಿಮ ಓವರ್‌ನಲ್ಲಿ ಯಶ್ ದಯಾಳ್ ಅತ್ಯುತ್ತಮವಾದ ಬೌಲಿಂಗ್ ತಂಡದ ಗೆಲುವಿಗೆ ಸಾಧ್ಯವಾಯಿತು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಧೋನಿ, ಎರಡನೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ಶಾರ್ದೂಲ್ ಠಾಕುರ್ ಅವರಿಗೆ ಮೂರನೇ ಎಸೆತದಲ್ಲಿ ಡಾಟ್ ಬಾಲ್ ನೀಡಿದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಪಡೆದರು. ಬಳಿಕ ಎರಡೂ ಎಸೆತಗಳು ಡಾಟ್ ಬಾಲ್ ಎಸೆಯುವ ಮೂಲಕ ಯಶ್ ದಯಾಶ್ ಚೆನ್ನೈ ವಿರುದ್ಧ 27 ರನ್ ಗೆಲುವು ಸಾಧಿಸಲು ನೆರವಾದರು.
ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಸೀಲ್ ಮಾಡಿರುವ ಕೆಕೆಆರ್, ಆರ್ ಮತ್ತು ಎಸ್‌ಆರ್‌ಎಚ್ ತಂಡಗಳು ಭಾನುವಾರ ಲೀಗ್ ಹಂತದ ತಮ್ಮ ಕೊನೆಯ ಪಂದ್ಯಗಳಲ್ಲಿ ಆಡಲಿವೆ. ಕೆಕೆಆರ್ ತಂಡ ಟಾಪ್ 2ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದ್ದು, ಆರ್‌ಆರ್ ಮತ್ತು ಎಸ್‌ಆರ್‌ಎಚ್ 2ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.
Advertisement