
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯುದ್ದಕ್ಕೂ ತನ್ನ ಬಲಾಢ್ಯ ಬ್ಯಾಟಿಂಗ್ ನಿಂದಲೇ ಸುದ್ದಿಯಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳ ಅಬ್ಬರಕ್ಕೆ ತತ್ತರಿಸಿ 160 ರನ್ ಗಳ ಸವಾಲಿನ ಗುರಿ ನೀಡಿದೆ.
ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19.3 ಓವರ್ ಗಳಲ್ಲಿ 159ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಕೋಲ್ಕತಾಗೆ ಗೆಲ್ಲಲು 160 ರನ್ ಗಳ ಸವಾಲಿನ ಗುರಿ ನೀಡಿದೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಹೈದರಾಬಾದ್ ತಂಡವನ್ನು ಕಟ್ಟಿಹಾಕುವಲ್ಲಿ ಕೋಲ್ಕತಾ ಬೌಲರ್ ಗಳು ಯಶಸ್ವಿಯಾದರು. ಹೈದರಾಬಾದ್ ನ ಆರಂಭಿಕರಾದ ಟ್ರಾವಿಸ್ ಹೆಡ್ (0)ಮತ್ತು ಅಭಿಷೇಕ್ ಶರ್ಮಾ (3) ಒಂದಂಕಿ ಮೊತ್ತಕ್ಕೆ ಔಟಾಗಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ರಾಹುಲ್ ತ್ರಿಪಾಠಿ 35 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಧಾರವಾಗಿ ನಿಂತರು.
ಆದರೆ ಅವರಿಗೆ ತಂಡದ ಇತರೆ ಬ್ಯಾಟರ್ ಗಳಿಂದ ಉತ್ತಮ ಸಾಥ್ ದೊರೆಯಲಿಲ್ಲ. ನಿತೀಶ್ ರೆಡ್ಡಿ 9 ರನ್ ವಿಕೆಟ್ ಒಪ್ಪಿಸಿದರೆ, ಶಾಬಾಜ್ ಅಹ್ಮದ್ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಈ ಹಂತದಲ್ಲಿ ತ್ರಿಪಾಠಿ ಜೊತೆಗೂಡಿದ ಹೆನ್ರಿಚ್ ಕ್ಲಾಸೆನ್ 32 ರನ್ ಗಳಿಸಿ ಕೊಂಚ ತಂಡಕ್ಕೆ ಆಸರೆಯಾದರು. ಅದರೆ ಚಕ್ರವರ್ತಿ ಬೌಲಿಂಗ್ ನಲ್ಲಿ ಅವರೂ ವಿಕೆಟ್ ಒಪ್ಪಿಸಿದರು.
ಹೆನ್ರಿಚ್ ಬೆನ್ನಲ್ಲೇ ಅರ್ಧಶತಕ ಗಳಿಸಿದ್ದ ತ್ರಿಪಾಠಿ ಕೂಡ ರನೌಟ್ ಗೆ ಬಲಿಯಾದರು. ಅಬ್ದುಲ್ ಸಮಾದ್ 16 ರನ್ ಗಳಿಸಿ ಔಟಾದರೆ, ಸನ್ವೀರ್ ಸಿಂಗ್, ಭುವನೇಶ್ವರ್ ಕುಮಾರ್ ಕೂಡ ಶೂನ್ಯ ಸುತ್ತಿದರು. ಅಂತಿಮ ಹಂತದಲ್ಲಿ ನಾಯಕ ಪ್ಯಾಟ್ ಕಮಿನ್ಸ್ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ 30 ರನ್ ಗಳಿಸಿ ತಂಡದ ಮೊತ್ತ 150 ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ ಹೈದರಾಬಾದ್ ತಂಡ 19.3 ಓವರ್ ಗಳಲ್ಲಿ 159ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಕೋಲ್ಕತಾಗೆ ಗೆಲ್ಲಲು 160 ರನ್ ಗಳ ಸವಾಲಿನ ಗುರಿ ನೀಡಿದೆ.
ಕೋಲ್ಕತಾ ಪರ ಮೆಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ಮತ್ತು ಆ್ಯಂಡ್ರೆ ರಸೆಲ್, ಸುನಿಲ್ ನರೇನ್, ಹರ್ಷಿತ್ ರಾಣಾ ಮತ್ತು ವೈಭವ್ ಆರೋರಾ ತಲಾ 1 ವಿಕೆಟ್ ಪಡೆದರು.
ಸೋತ ತಂಡಕ್ಕೆ ಮತ್ತೊಂದು ಅವಕಾಶ
ಇನ್ನು ಈ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ಕ್ವಾಲಿಫೈಯರ್ 2ನಲ್ಲಿ ಆಡುವ ಅವಕಾಶ ಪಡೆಯಲಿದೆ.
Advertisement