
ಕೊಲಂಬೋ: ಶ್ರೀಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಡಂಬುಲ್ಲಾ ಥಂಡರ್ಸ್ ತಂಡದ ಮಾಲೀಕನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. ಲಂಕಾ ಪ್ರೀಮಿಯರ್ ಲೀಗ್ (LPL 2024) ಫ್ರಾಂಚೈಸಿ ಡಂಬುಲ್ಲಾ ಥಂಡರ್ಸ್ನ ಮಾಲೀಕರಾಗಿರುವ ಬಾಂಗ್ಲಾದೇಶ ಮೂಲದ ಬ್ರಿಟಿಷ್ ಪ್ರಜೆ ತಮೀಮ್ ರೆಹಮಾನ್ ಅವರನ್ನು ಮ್ಯಾಚ್ ಫಿಕ್ಸಿಂಗ್ಸ್ನಲ್ಲಿ ತೊಡಗಿರುವ ಅನುಮಾನದ ಮೇಲೆ ಬುಧವಾರ ಬಂಧಿಸಲಾಗಿದೆ.
ಶ್ರೀಲಂಕಾ ಕ್ರೀಡಾ ಸಚಿವಾಲಯದ ಕ್ರೀಡೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆಯ ವಿಶೇಷ ತನಿಖಾ ಘಟಕದ ಅಧಿಕಾರಿಯೊಬ್ಬರು ಬ್ರಿಟಿಷ್ ಪೌರತ್ವವನ್ನು ಹೊಂದಿರುವ ವ್ಯಕ್ತಿಯ ಬಂಧನ ದೃಢಪಡಿಸಿದ್ದಾರೆ.
ಅಂತೆಯೇ ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರೆಹಮಾನ್ ಅವರನ್ನು ಮೇ 31 ರವರೆಗೆ ಕಸ್ಟಡಿಗೆ ಒಪ್ಪಿಸಿದ್ದು, ನ್ಯಾಯಾಲಯದ ಆದೇಶದ ನಂತರ ನಗರದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆಹಮಾನ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ನಿಖರವಾದ ಆರೋಪಗಳು ಇನ್ನೂ ಸ್ಪಷ್ಟವಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿದ ದೇಶದ ಕ್ರೀಡಾ ಕಾಯ್ದೆಯ ಎರಡು ನಿಬಂಧನೆಗಳ ಅಡಿಯಲ್ಲಿ ಅವರನ್ನು ತನಿಖೆ ನಡೆಸಲಾಗುತ್ತಿದೆ.
ಈ ಹಿಂದೆ ಕೊಲಂಬೊದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಭಾರತೀಯ ಪ್ರಜೆಗಳಾದ ಯೋನಿ ಪಟೇಲ್ ಮತ್ತು ಪಿ ಆಕಾಶ್ ಅವರ ಪಾಸ್ಪೋರ್ಟ್ಗಳನ್ನು ಹಿಂದಿರುಗಿಸುವಂತೆ ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಆದೇಶಿಸಿತ್ತು. ಅನುಮತಿ ಪಡೆಯದೇ ಲೆಜೆಂಡ್ಸ್ ಲೀಗ್ನಲ್ಲಿ ಪಟೇಲ್ ಒಂದು ತಂಡವನ್ನು ಹೊಂದಿದ್ದರು ಎಂಬ ಆರೋಪವಿದೆ.
ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಇವರಿಬ್ಬರು ಮಾರ್ಚ್ 8 ಮತ್ತು 19 ರ ನಡುವೆ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಲೀಗ್ನ ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ.
ಟೂರ್ನಿಯಿಂದ ತಂಡವನ್ನೇ ಕಿತ್ತೊಗೆದ ಶ್ರೀಲಂಕಾ ಕ್ರಿಕೆಟ್ ಮಂಡಳಿ
ಇನ್ನು ಫಿಕ್ಸಿಂಗ್ ಆರೋಪ ಕೇಳಿಬಂದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಡಂಬುಲ್ಲಾ ಥಂಡರ್ಸ್ ತಂಡವನ್ನೇ ಟೂರ್ನಿಯಿಂದ ಕಿತ್ತೊಗೆದಿದೆ. ಅಂತೆಯೇ ತಕ್ಷಣವೇ ಜಾರಿಗೆ ಬರುವಂತೆ ಡಂಬುಲ್ಲಾ ಥಂಡರ್ಸ್ ಫ್ರಾಂಚೈಸ್ ನ ಹಕ್ಕುಗಳನ್ನು ನಿರ್ಬಂಧಿಸಿದೆ.
2019 ರಲ್ಲಿ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನು ಅಪರಾಧವೆಂದು ಪರಿಗಣಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿತ್ತು. ತಪ್ಪಿತಸ್ಥರೆಂದು ಸಾಬೀತಾದ ಯಾರಿಗಾದರೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕಾಗುತ್ತದೆ.
ಅಂದಹಾಗೆ ಡಂಬುಲ್ಲಾ ಫ್ರಾಂಚೈಸಿಯನ್ನು ಬಾಂಗ್ಲಾದೇಶದ ಉದ್ಯಮಿಗಳ ನೇತೃತ್ವದ ಇಂಪೀರಿಯಲ್ ಸ್ಪೋರ್ಟ್ಸ್ ಗ್ರೂಪ್ ಏಪ್ರಿಲ್ನಲ್ಲಿ ಖರೀದಿಸಿತ್ತು. LPL ಜುಲೈ 1 ರಿಂದ 21 ರವರೆಗೆ ನಡೆಯಲಿದೆ.
Advertisement