
ವಾಷಿಂಗ್ಟನ್: ಐಸಿಸಿ ಟಿ20 ಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಆಟಗಾರರ ಕೊರತೆಯಿಂದಾಗಿ ಪ್ರಧಾನ ಕೋಚ್ ಮತ್ತು ತಂಡದ ಆಯ್ಕೆದಾರರೇ ಫೀಲ್ಡಿಗಿಳಿದ ವಿಚಿತ್ರ ಘಟನೆ ನಡೆದಿದೆ.
ಹೌದು.. ನಮೀಬಿಯಾ ವಿರುದ್ಧದ T20 ವಿಶ್ವಕಪ್ ಅಭ್ಯಾಸದಲ್ಲಿ ಮುಖ್ಯ ಆಯ್ಕೆದಾರ ಮತ್ತು ಮುಖ್ಯ ತರಬೇತುದಾರ ಸೇರಿದಂತೆ ಒಂಬತ್ತು ಮಂದಿ ಕೋಚಿಂಗ್ ಸಿಬ್ಬಂದಿಗಳು ಆಟಗಾರರ ಪರವಾಗಿ ಮೈದಾನಕ್ಕಿಳಿದು ಆಟವಾಡಿದ್ದಾರೆ. ಇತ್ತೀಚೆಗಷ್ಟೇ ಆಸಿಸ್ ಆಟಗಾರರು ಭಾರತದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡು ಧಣಿದಿದ್ದಾರೆ.
ನಾಯಕ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಎರಡು ತಿಂಗಳ ಸುದೀರ್ಘ ಐಪಿಎಲ್ ನಂತರ ಹೆಚ್ಚುವರಿ ರಜೆ ಪಡೆದಿದ್ದು ಹೀಗಾಗಿ ನಮೀಬಿಯಾ ತಂಡದ ವಿರುದ್ಧದ ತರಬೇತಿ ಪಂದ್ಯದಲ್ಲಿ ತರಬೇತಿ ದಾರರೇ ಆಸಿಸ್ ಪರ ಮೈದಾನಕ್ಕಿಳಿಯುವ ಅನಿವಾರ್ಯತೆ ಸೃಷ್ಟಿಯಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ 119 ರನ್ ಗಳ ಸಾಧಾರಣ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಹತ್ತಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ (21 ಎಸೆತಗಳಲ್ಲಿ ಔಟಾಗದೆ 54), ಜೋಶ್ ಹೇಜಲ್‌ವುಡ್ (2/5) ಮತ್ತು ಲೆಗ್ ಸ್ಪಿನ್ನರ್ ಆಡಮ್ ಝಂಪಾ (3/25) ಅವರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಇನ್ನೂ 10 ಓವರ್ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದಕ್ಕೂ ಮೊದಲು ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದಾಗ ಆಸಿಸ್ ತಂಡಕ್ಕೆ ಆಟಗಾರರ ಕೊರೆತ ಕಾಡಿತು. ಈ ವೇಳೆ ಸ್ವತಃ 46 ವರ್ಷದ ಫೀಲ್ಡಿಂಗ್ ತರಬೇತುದಾರ ಆಂಡ್ರೆ ಬೊರೊವೆಕ್, 49 ವರ್ಷದ ಬ್ಯಾಟಿಂಗ್ ಕೋಚ್ ಬ್ರಾಡ್ ಹಾಡ್ಜ್ , ಕೋಚಿಂಗ್ ಸಿಬ್ಬಂದಿ ಮೆಕ್‌ಡೊನಾಲ್ಡ್ ಮೈದಾನಕ್ಕಿಳಿದು ಫೀಲ್ಡಿಂಗ್ ಮಾಡಿದ್ದರು. ಮೂರು ತಿಂಗಳಲ್ಲಿ ಮೊದಲ ಪಂದ್ಯವನ್ನು ಆಡಿದ ಹೇಝಲ್‌ವುಡ್ ಉತ್ತಮ ಲಯ ಕಂಡುಕೊಂಡಿದ್ದು ಈ ಪಂದ್ಯದ ಮತ್ತೊಂದು ವಿಶೇಷವಾಗಿತ್ತು.
Advertisement