Champions Trophy: ಭಾರತೀಯ ಅಭಿಮಾನಿಗಳ ಮೇಲೆ PCB ಕಣ್ಣು; ಭಾರತ ಓಲೈಸಲು ಪಾಕ್ ವಿಭಿನ್ನ ತಂತ್ರ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮತ್ತು ಕೇಂದ್ರ ಸಚಿವ ಮೊಹ್ಸಿನ್ ನಖ್ವಿ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ತಮ್ಮ ದೇಶಕ್ಕೆ ಭೇಟಿ ನೀಡಲು ಬಯಸುವ ಭಾರತೀಯ ಅಭಿಮಾನಿಗಳಿಗೆ ಶೀಘ್ರ ವೀಸಾ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಮೆರಿಕದ ಸಿಖ್ ಯಾತ್ರಾರ್ಥಿಗಳ ಗುಂಪಿನೊಂದಿಗೆ ನಡೆದ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಭರವಸೆಯನ್ನು ಪಿಸಿಬಿ ಹೊಂದಿದೆ ಎಂದು ನಖ್ವಿ ಹೇಳಿದರು. ಭಾರತೀಯ ಅಭಿಮಾನಿಗಳು ಪಾಕಿಸ್ತಾನಕ್ಕೆ ಬಂದು ಲಾಹೋರ್‌ನಲ್ಲಿ ಈ ಎರಡು ದೇಶಗಳ ನಡುವಿನ ಪಂದ್ಯವನ್ನು ವೀಕ್ಷಿಸಬೇಕೆಂದು ಅವರು ಬಯಸುತ್ತಾರೆ.
ನಾವು ಭಾರತೀಯ ಅಭಿಮಾನಿಗಳಿಗೆ ಟಿಕೆಟ್‌ಗಳ ವಿಶೇಷ ಕೋಟಾವನ್ನು ಇಟ್ಟುಕೊಳ್ಳುತ್ತೇವೆ. ವೀಸಾಗಳನ್ನು ಶೀಘ್ರವಾಗಿ ನೀಡಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಖ್ವಿ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತದೆ. ಆದರೆ ಭಾರತ ಸರ್ಕಾರವು ತನ್ನ ತಂಡವನ್ನು ಟೂರ್ನಿಗೆ ಕಳುಹಿಸುತ್ತದೆಯೇ ಎಂಬ ಸ್ಪಷ್ಟನೆ ಇಲ್ಲದಿರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇನ್ನೂ ತನ್ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಟೀಂ ಇಂಡಿಯಾವನ್ನು ತನ್ನ ದೇಶಕ್ಕೆ ಆಹ್ವಾನಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬಂದರೆ, ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುವುದು ಮತ್ತು ಕ್ರಿಕೆಟ್‌ಗೆ ದೊಡ್ಡ ವಿಷಯವಾಗಲಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಹೇಳಿದ್ದಾರೆ.