ಡರ್ಬನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದ್ದು, ಆ ಮೂಲಕ 4 ಪಂದ್ಯಗಳ T20 ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಪಡೆ ಶುಭಾರಂಭ ಮಾಡಿದೆ.
ಡರ್ಬನ್ ನ ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 203 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ನಿಗಧಿತ 20 ಓವರ್ ನಲ್ಲಿ 141 ರನ್ ಗೆ ಆಲೌಟ್ ಆಗಿದ್ದು, ಆ ಮೂಲಕ 61ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ಪರ ರಿಕೆಲ್ಟನ್ (21 ರನ್), ಸ್ಟಬ್ಸ್ (11 ರನ್), ಹೆನ್ರಿಚ್ ಕ್ಲಾಸನ್ (25), ಡೇವಿಡ್ ಮಿಲ್ಲರ್ (18 ರನ್), ಜಾನ್ಸನ್ (12 ರನ್) ರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಅಂತಿಮ ಹಂತದಲ್ಲಿ ಕೋಯಿಟ್ಜಿ 23 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ ನಲ್ಲಿ 141 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತ 61ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.
ಭಾರತದ ಪರ ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದರೆ, ಆವೇಶ್ ಖಾನ್ 2 ಮತ್ತು ಅರ್ಶ್ ದೀಪ್ ಸಿಂಗ್ ಒಂದು ವಿಕೆಟ್ ಪಡೆದರು.
Advertisement