ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ತಂಡಕ್ಕೆ ಟೆಸ್ಟ್ ಸರಣಿ ನಿರ್ಣಾಯಕವಾಗಿದ್ದು, ಪರ್ತ್ ಟೆಸ್ಟ್ ನಿಂದ ನಾಯಕ ರೋಹಿತ್ ಶರ್ಮಾ ಅಲಭ್ಯರಾಗುವ ಹಿನ್ನಲೆಯಲ್ಲಿ ಜಸ್ ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಅಂತೆಯೇ ಕೋಚ್ ಗೌತಮ್ ಗಂಭೀರ್ ತಂಡದಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿದ್ದು, ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ಉಪ ನಾಯಕ ಜಸ್ ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.
ಅಂತೆಯೇ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಗೆ ಆರಂಭಿಕರಾಗಿ ಭಡ್ತಿ ನೀಡುವ ಸಾಧ್ಯತೆ ಇದೆ. ಭಾರತ ತಂಡದ ಎರಡನೇ ಬ್ಯಾಚ್ ಸೋಮವಾರ ಪರ್ತ್‌ಗೆ ತೆರಳಲಿದ್ದು, ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಟೆಸ್ಟ್ ಆಡುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಹೀಗಾಗಿ ರೋಹಿತ್ ಅನುಭಸ್ಥಿತಿಯಲ್ಲಿ ಬುಮ್ರಾ ತಂಡದ ಸಾರಥ್ಯವಹಿಸಲಿದ್ದಾರೆ.
ರೋಹಿತ್ ಅವರ ಅನುಪಸ್ಥಿತಿಯು ಬ್ಯಾಟಿಂಗ್ ಕ್ರಮಾಂಕದ ಆರಂಭಿಕ ಆಟಗಾರ ಕೊರತೆ ಕಾಣಲಿದ್ದು, ಈ ಕೊರತೆ ನೀಗಿಸಲು ಟೀಂ ಮ್ಯಾನೇಜ್ ಮೆಂಟ್ ಸಾಕಷ್ಟು ಅವಕಾಶಗಳನ್ನು ಎದುರುನೋಡುತ್ತಿದೆ. ಮುಖ್ಯವಾಗಿ ಭಾರತ ಎ ಪರ ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಟೆಸ್ಟ್‌ಗಳಲ್ಲಿ ಆಡಿದ ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ ಕೋಚ್ ಗಂಭೀರ್ ಪ್ರಕಾರ ಅನುಭವದ ಆಧಾರದ ಮೇಲೆ ಕೆಎಲ್ ರಾಹುಲ್ ರನ್ನೇ ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಗಂಭೀರ್ ಹೇಳಿರುವಂತೆ ತಂಡದಲ್ಲಿ ನಿಸ್ಸಂಶಯವಾಗಿ ಉದಯೋನ್ಮುಖ ಆಟಗಾರ ಈಶ್ವರನ್ ಇದ್ದಾರೆ ಆದರೂ ಅಲ್ಲಿ ಕೆಎಲ್ ರಾಹುಲ್ ಇದ್ದು, ಇಲ್ಲಿ ಅನುಭವವನ್ನು ಪರಿಗಣಿಸಿ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಬಗ್ಗೆ ಅಂತಿಮ ಕ್ಷಣಗಳಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಉತ್ತಮ ತಂಡದ ಆಯ್ಕೆಗೆ ನಾವು ಆದ್ಯತೆ ನೀಡುತ್ತೇವೆ. ಕೆಎಲ್ ಆರಂಭಿಕರಾಗಿ, ಮಧ್ಯಮ ಕ್ರಮಾಂಕದಲ್ಲಿ ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ತಂಡಕ್ಕೆ ಯಾವ ಹಂತದಲ್ಲಿ ಅವರ ಸೇವೆ ಅಗತ್ಯವಿರುತ್ತದೆಯೋ ಆಗ ಬಳಸಿಕೊಳ್ಳುತ್ತೇವೆ ಎಂದು ಗಂಭೀರ್ ಹೇಳಿದರು.
ಶಾರ್ದೂಲ್ ಗೆ ಕೈತಪ್ಪಲಿದೆ ಅವಕಾಶ
ಇದೇ ವೇಳೆ ನಿತೀಶ್ ರಾಣಾ ಅವರನ್ನು ಬೆಂಬಲಿಸಿರುವ ಗಂಭೀರ್, ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡದಿರುವ ಕುರಿತು ಸುಳಿವು ನೀಡಿದ್ದಾರೆ. ಶಾರ್ದೂಲ್ ಠಾಕೂರ್ ಗೆ ಹೋಲಿಕೆ ಮಾಡಿದರೆ ನಿತೀಶ್ ರಾಣಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಹೊಂದಿದ್ದಾರೆ. 'ನಿತೀಶ್ ರೆಡ್ಡಿ, ಅವರು ಎಷ್ಟು ಅದ್ಭುತವಾದ ಪ್ರತಿಭಾವಂತರು ಎಂಬುದು ನಮಗೆಲ್ಲರಿಗೂ ತಿಳಿದಿದೆ ಮತ್ತು ಆಯ್ಕೆಯನ್ನು ನೀಡಿದರೆ, ಅವರು ಖಂಡಿತಾ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ ವಿಶ್ವಾಸವಿದೆ' ಎಂದು ಗಂಭೀರ್ ಹೇಳಿದರು.
10 ದಿನಗಳ ತರಬೇತಿ
ಸೋಮವಾರ ಭಾರತ ತಂಡದ ಎರಡನೇ ಬ್ಯಾಚ್‌ನೊಂದಿಗೆ ಪ್ರಯಾಣಿಸಲಿರುವ ಗಂಭೀರ್, ಮುಂದಿನ 10 ದಿನಗಳಲ್ಲಿ ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ತಂಡಕ್ಕೆ ಪ್ರಮುಖವಾಗಿದೆ ಎಂದು ಹೇಳಿದರು. ಆಸ್ಟ್ರೇಲಿಯಾಕ್ಕೆ ಹಲವು ಬಾರಿ ಭೇಟಿ ನೀಡಿದ ಅನುಭವಿ ಆಟಗಾರರನ್ನು ನಾವು ಪಡೆದಿದ್ದೇವೆ. ಅವರ ಅನುಭವ ಯುವ ಆಟಗಾರರಿಗೂ ಉಪಯೋಗಕ್ಕೆ ಬರಲಿದೆ. ಈ 10 ದಿನಗಳು ಬಹಳ ನಿರ್ಣಾಯಕವಾಗಲಿವೆ. ಆದರೆ 22 ರ ಬೆಳಿಗ್ಗೆ, ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.
ಅಂದಹಾಗೆ ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭಾಗವಾಗಿ ಭಾರತ ಎದುರಿಸಲಿರುವ ಕೊನೆಯ ಸರಣಿ. ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ ತಲುಪಲು ರೋಹಿತ್ ಪಡೆಗೆ ಈ ಸರಣಿ ನಿರ್ಣಾಯಕವಾಗಿದೆ. ಇದರಲ್ಲಿ ಕನಿಷ್ಠ 4 ಪಂದ್ಯಗಳನ್ನು ಭಾರತ ಗೆಲ್ಲಲೇಬೇಕಿದೆ. ಹಾಗಾದಲ್ಲಿ ಮಾತ್ರ ಟೀಂ ಇಂಡಿಯಾ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸದೇ ನೇರವಾಗಿ WTC ಫೈನಲ್ ತಲುಪಲು ಸಾಧ್ಯವಿದೆ.
Advertisement