ಪರ್ತ್: ಪ್ರಬಲ ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಭಾರತದ ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಗೆ ಅದೃಷ್ಟ ಖುಲಾಯಿಸಿದಂತಿದೆ.
ಹೌದು.. ಈಗಾಗಲೇ ಅಭ್ಯಾಸ ಪಂದ್ಯಗಳಿಗಾಗಿ ಕಳೆದ 20 ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದ ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಎ ತಂಡ ಇಂದು ಸ್ವದೇಶಕ್ಕೆ ಮರಳುತ್ತಿದ್ದು, ಇದರ ನಡುವೆಯೇ ಆ ತಂಡದ ಸದಸ್ಯ ದೇವದತ್ ಪಡಿಕ್ಕಲ್ ರನ್ನು ದೇಶಕ್ಕೆ ಮರಳದೇ ಆಸ್ಟ್ರೇಲಿಯಾದಲ್ಲೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮಗೆ ಮಗು ಆಗಿರುವುದರಿಂದ ಅವರು ಮೊದಲ ಪಂದ್ಯಕ್ಕೆ ಗೈರಾಗುವ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಉಪ ನಾಯಕ ಜಸ್ ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದು, ಹೀಗಾಗಿ ರೋಹಿತ್ ಶರ್ಮಾ ಗೈರಿನಿಂದಾಗುವ ಸ್ಥಾನಕ್ಕಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ರನ್ನು ಆಯ್ಕೆ ಮಾಡುವ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಆಸ್ಟ್ರೇಲಿಯಾದಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಪಡಿಕ್ಕಲ್ ಕಳೆದ 20 ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದು ಅಲ್ಲಿನ ವಾತಾವರಣಕ್ಕೆ ಸಿದ್ಧರಾಗಿದ್ದು, ಇದು ಮುಂದಿನ 50 ದಿನಗಳ ಕಾಲ ಅವರು ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲು ನೆರವಾಗಲಿದೆ ಎಂದೂ ಹೇಳಲಾಗಿದೆ. ಅಲ್ಲದೆ ಪಡಿಕ್ಕಲ್ ಆಸ್ಟ್ರೇಲಿಯಾ ವಿರುದ್ಧ ತಾವಾಡಿದ 4 ಇನ್ನಿಂಗ್ಸ್ ಗಳಲ್ಲಿ 36, 88, 26, ಮತ್ತು 1 ರನ್ ಕಲೆಹಾಕಿದ್ದರು. ಹೀಗಾಗಿ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಂಡುವ ಆಡುವ ಅವರ ಗುಣ ಇದೀಗ ಅವರನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಮಾಡಿದೆ. ಇದೊಂದೇ ಪ್ರದರ್ಶನ ಮಾತ್ರವಲ್ಲದೇ ಪಡಿಕ್ಕಲ್ ಅವರ ಅನುಭವವನ್ನೂ ಕೂಡ ಪರಿಗಣನೆಗೆ ತೆಗೆದುಕೊಂಡು ತಂಡದ ಆಡಳಿತ ಮಂಡಳಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ ಎನ್ನಲಾಗಿದೆ.
ಇನ್ನು ಭಾರತ ತಂಡದಲ್ಲಿ ಈಗಾಗಲೇ ಕೆಎಲ್ ರಾಹುಲ್ ಮತ್ತು ಶುಭ್ ಮನ್ ಗಿಲ್ ಗಾಯಗೊಂಡಿದ್ದು ಇಬ್ಬರೂ ಬಹುತೇಕ ಮೊದಲ ಟೆಸ್ಟ್ ಪಂದ್ಯದಿಂದ ಗೈರಾಗುವ ಸಾಧ್ಯತೆ ಇದೆ. ಹೀಗಾಗಿ ಇದೇ ನವೆಂಬರ್ 22ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ರಬಲ ಆಟಗಾರರ ದಂಡೇ ಬೇಕಿದೆ. ಇದರ ನಡುವೆ ಮಹಮದ್ ಶಮಿಯನ್ನೂ ತಂಡಕ್ಕೆ ಕರೆತರುವ ಮಾತುಕತೆ ನಡೆದಿತ್ತಾದರೂ ಪ್ರಸ್ತುತ ಶಮಿ ಆಯ್ಕೆಗೆ ಯಾವುದೇ ತುರ್ತಿಲ್ಲ.. ಅಗತ್ಯ ಬಿದ್ದರೆ ಖಂಡಿತ ಕರೆಸಿಕೊಳ್ಳುತ್ತೇವೆ ಎಂದು ತಂಡದ ಮೂಲಗಳು ತಿಳಿಸಿವೆ.
Advertisement