ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, 2ನೇ ಇನ್ನಿಂಗ್ಸ್ ನಲ್ಲಿ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 172 ರನ್ ಕಲೆಹಾಕಿದೆ. ಅಲ್ಲದೆ 218 ರನ್ ಗಳ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 104 ರನ್ ಗಳಿಗೇ ಆಲೌಟ್ ಆಗಿದ್ದು, ಆ ಮೂಲಕ ಭಾರತದ ವಿರುದ್ಧ 46ರನ್ ಗಳ ಹಿನ್ನಡೆ ಅನುಭವಿಸಿತು.
46 ರನ್ ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ನೀಡಿದ್ದು, ಮುರಿಯದ ಮೊದಲ ವಿಕೆಟ್ ಗೆ ಈ ಜೋಡಿ 172 ರನ್ ಕಲೆಹಾಕಿದೆ. ಅಲ್ಲದೆ ಆ ಮೂಲಕ ಭಾರತಕ್ಕೆ 218 ರನ್ ಮುನ್ನಡೆ ತಂದಿತ್ತಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 193 ಎಸೆತಗಳಲ್ಲಿ 2 ಸಿಕ್ಸರ್ 7 ಬೌಂಡರಿ ಸಹಿತ ಅಜೇಯ 90 ರನ್ ಕಲೆಹಾಕಿದ್ದು, ಅವರಿಗೆ ಉತ್ತಮ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 153 ಎಸೆತಗಳಲ್ಲಿ 4 ಬೌಂಡರಿ ಸಹಿತ 62 ಕಲೆಹಾಕಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಪರ ಇಂದು ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಒಟ್ಟು 7 ಬೌಲರ್ ಗಳು ದಾಳಿ ಮಾಡಿದರೂ ಯಾರೂ ಕೂಡ ಭಾರತದ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ. ಒಟ್ಟಾರೆ ಇಂದು ತನ್ನ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡ ದಿನದ ಗೌರವ ಪಡೆಯಿತು.
Advertisement