ಜಿದ್ದಾ: ಸೌದಿ ಅರಬೀಯಾದ ಜಿದ್ದಾದಲ್ಲಿ ನಡೆಯುತ್ತಿರುವ IPL 2025 ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯ ಅವರು RCB ಪಾಲಾಗಿದ್ದಾರೆ.
ಎರಡನೇ ದಿನದ ಹರಾಜು ಪ್ರಕ್ರಿಯೆಯಲ್ಲಿ RCB ವೇಗಿ ಭುವನೇಶ್ವರ್ ಕುಮಾರ್ ಗೆ 10.75 ಕೋಟಿ ರೂ. ನೀಡಿ ಖರೀದಿಸಿತು. ಅದೇ ರೀತಿ ಹಾರ್ದಿಕ್ ಪಾಂಡ್ಯ ಅವರ ಸಹೋದರ,ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯಗೆ ಕೃನಾಲ್ ಪಾಂಡ್ಯಗೆ 5.75 ಕೋಟಿ ಬಿಡ್ ಸಲ್ಲಿಸಿತು.
2 ಕೋಟಿ ಮೂಲ ಬೆಲೆ ಹೊಂದಿದ್ದ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಭಾರೀ ಪೈಪೋಟಿ ನಡೆಸಿದವು. ಲಕ್ನೋ ಸೂಪರ್ ಜೈಂಟ್ಸ್ 10 ಕೋಟಿ ಬಿಡ್ ಸಲ್ಲಿಸಿತು. ಅಂತಿಮವಾಗಿ RCB 10. 75 ಕೋಟಿ ಬಿಡ್ ಸಲ್ಲಿಸುವ ಮೂಲಕ ಭುವಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಕೃನಾಲ್ ಪಾಂಡ್ಯ ಖರೀದಿಗಾಗಿ ಬೆಂಗಳೂರು ಮತ್ತು ರಾಜಸ್ಥಾನ ನಡುವೆ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಅವರನ್ನು ಆರ್ ಸಿಬಿ ಖರೀದಿಸಿತು.ಈ ಹಿಂದೆ ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದರು.
2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿದ್ದ ಕೃನಾಲ್ರನ್ನು ಲಕ್ನೋ ಫ್ರಾಂಚೈಸ್ 8.25 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡದ ಕಾರಣ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರು.
ಇನ್ನು ಐಪಿಎಲ್‌ನಲ್ಲಿ 127 ಪಂದ್ಯಗಳನ್ನು ಆಡಿರುವ ಕೃನಾಲ್ 132.82 ರ ಸ್ಟ್ರೈಕ್ ರೇಟ್ ಹಾಗೂ 22.56ರ ಸರಾಸರಿಯೊಂದಿಗೆ 1,647 ರನ್ ಕಲೆಹಾಕಿದ್ದಾರೆ. ಹಾಗೆಯೇ ಸ್ಪಿನ್ ಬೌಲರ್ ಆಗಿರುವ ಕೃನಾಲ್, ಇದುವರೆಗೆ ಆಡಿರುವ 127 ಪಂದ್ಯಗಳಲ್ಲಿ 34.28 ರ ಸರಾಸರಿ ಮತ್ತು 7.36 ರ ಎಕಾನಮಿ ದರದಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ತುಷಾರ್ ದೇಶ್ ಪಾಂಡೆ ರೂ. 6.50 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದರು. ನಿತೀಶ್ ರಾಣಾ ಕೂಡಾ ರೂ. 4. 20 ಕೋಟಿಗೆ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ಸೇರಿದರು.
Advertisement