
ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಹೀನಾಯ ಸೋಲು ಕಂಡಿದ್ದು, ಕಿವೀಸ್ ಪಡೆ ಶುಭಾರಂಭ ಮಾಡಿದೆ.
ದುಬೈ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 160 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 102 ರನ್ ಗಳಿಗೇ ಆಲೌಟ್ ಆಗುವ ಮೂಲಕ 58 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಭಾರತದ ಪರ ಸ್ಮೃತಿ ಮಂದಾನ (12), ನಾಯಕಿ ಹರ್ಮನ್ ಪ್ರೀತ್ ಕೌರ್ (15), ಜೆಮಿಮಾ ರೋಡ್ರಿಗಸ್ (13), ರಿಚಾ ಘೋಷ್ (12) ಮತ್ತು ದೀಪ್ತಿ ಶರ್ಮಾ (13) ರನ್ ಗಳಿಸುವ ಪ್ರಯತ್ನದಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಮಾರಕವಾಯಿತು.
ತಂಡದ ಪ್ರಮುಖ ಬ್ಯಾಟರ್ ಗಳೇ ರನ್ ಗಳಿಸದೇ ಔಟಾಗಿದ್ದು ತಂಡದ ಸೋಲಿಗೆ ಕಾರಣವಾಯಿತು. ಅಂತಿಮವಾಗಿ ಭಾರತ 19 ಓವರ್ ನಲ್ಲಿ 102 ರನ್ ಗಳಿಸಿ ಆಲೌಟ್ ಆಯಿತು. ಅಲ್ಲದೆ 58 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
ನ್ಯೂಜಿಲೆಂಡ್ ಪ್ರಭಾವಿ ಬೌಲಿಂಗ್
ಇನ್ನು ನ್ಯೂಜಿಲೆಂಡ್ ಪರ ರೋಸ್ಮರಿ ಮೈರ್ ಪ್ರಭಾವಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಉಳಿದಂತೆ ಲೀ ತಹುಹು 3, ಈಡನ್ ಕಾರ್ಸನ್ 2 ಮತ್ತು ಅಮೆಲಿಯಾ ಕೆರ್ 1 ವಿಕೆಟ್ ಪಡೆದರು.
ನ್ಯೂಜಿಲೆಂಡ್ ಬೃಹತ್ ಮೊತ್ತ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ನಾಯಕಿ ಸೋಫಿ ಡಿವೈನ್ (ಅಜೇಯ 57) ಅಮೋಘ ಅರ್ಧಶತಕ, ಪ್ಲಿಮ್ಮರ್ (34) ಮತ್ತು ಸೂಜಿ ಬೇಟ್ಸ್ (27)ರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿತ್ತು.
ಅರ್ಧಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ನ್ಯೂಜಿಲೆಂಡ್ ತಂಡ ನಾಯಕಿ ಸೋಫಿ ಡಿವೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
Advertisement